ಹಲವಾರು ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿರುವ ಹಾಗೂ ಅನಿವಾರ್ಯ ಸಂದರ್ಭಗಳಲ್ಲಿ ಮರಗಳ ಸ್ಥಳಾಂತರ ಕಾರ್ಯ ಮಾಡುತ್ತಿರುವ ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಅವರನ್ನು ಬಿ.ಸಿ.ರೋಡಿನ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಮಾತನಾಡಿ ಮಾನವನಾಗಿ ಹುಟ್ಟಿದ ಮೇಲೆ ಬದುಕಿನಲ್ಲಿ ಯಾವುದೇ ಸಾಧನೆ ಮಾಡದಿದ್ದರೂ ಮುಂದಿನ ಪೀಳಿಗೆಗಾಗಿ ಗಿಡ ಮರಗಳನ್ನು ನೆಟ್ಟು ಪೋಷಿಸಿದರೆ ಅದುವೇ ಆತನ ದೊಡ್ಡ ಕೊಡುಗೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ಮಾತನಾಡಿ ಸ್ವಚ್ಛತೆಯ ವಿಚಾರದಲ್ಲಿ ವ್ಯಕ್ತಿಯೊಬ್ಬ ತಾನು ಮಾಡುವ ಸಣ್ಣ ಪ್ರಯತ್ನವೇ ಮುಂದಕ್ಕೆ ದೊಡ್ಡ ಕ್ರಾಂತಿಯಾಗಬಹುದು ಎಂದು ಸರಿದಂತರ ಪ್ರಕಾಶನ ಕೈಗೊಂಡ ಕಾರ್ಯವನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪ್ರಕಾಶನದ ಸಂಯೋಜಕ ರಾಜಮಣಿ ರಾಮಕುಂಜ ಪಾಟ್ ಕಾಂಪೋಸ್ಟಿಂಗ್ ಕುರಿತು ಪ್ರಾತ್ಯಕ್ಷಿಕೆ ನೀಡಿ ಅದರ ಮಹತ್ವದ ಕುರಿತು ವಿವರಿಸಿದರು.
ಪುರಸಭಾ ಸದಸ್ಯ ಲೋಲಾಕ್ಷ ಶೆಟ್ಟಿ ಉಪಸ್ಥಿತರಿದ್ದ ಬಿ.ಮೂಡ ಗ್ರಾಮದ ಪುರಸಭಾ ಸದಸ್ಯರಿಗೆ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ನೀಡುವ ಫಲಕಗಳನ್ನು ವಿತರಿಸಿದರು.
ಅಡ್ಕತ್ತಿಮಾರ್ ರಾಮಚಂದ್ರ ಭಟ್ ಶುಭಾಶಂಸನೆಗೈದರು. ಜಗದೀಶ ಹೊಳ್ಳ ಪ್ರಾರ್ಥಿಸಿದರು. ಧಾತ್ರಿ ರಾಮಕುಂಜ ನಿರೂಪಿಸಿ, ಮೇಧಾ ರಾಮಕುಂಜ ವಂದಿಸಿದರು.
Be the first to comment on "ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಸನ್ಮಾನ ಕಾರ್ಯಕ್ರಮ"