ದ.ಕ.ಜಿಲ್ಲೆಯಲ್ಲಿ 2017-18 ಮತ್ತು 2018-19 ನೇ ಸಾಲಿನಲ್ಲಿ ನವಂಬರ್ ವರೆಗೆ ಅಕ್ರಮ ಮರಳಗಾರಿಕೆಗೆ ಸಂಬಂಧಿಸಿ ಒಟ್ಟು 40 ಪ್ರಕರಣಗಳು ವಿವಿಧ ಠಾಣೆಯಲ್ಲಿ ಕೇಸು ದಾಖಲಾಗಿದ್ದು,30.76 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಙಾನ ಸಚಿವ ರಾಜಶೇಖರ ಪಾಟೀಲ ಅವರು ತಿಳಿಸಿದ್ದಾರೆ.
ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. 2017-18,18-19 ರ ಅಕ್ಟೋಬರ್ ವರೆಗೆ 24 ಅಕ್ರಮ ಮರಳುಗಾರಿಕೆ ಸಾಗಾಟವನ್ನು ಪತ್ತೆಹಚ್ಚಿ 28.42ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರ ಉಪ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಕಾಮಗಾರಿ ಕುಂಠಿತ:
ರಾಜ್ಯದ ಕರಾವಳಿಯ ದ.ಕ,ಉ.ಕ,ಉಡುಪಿ ಜಿಲ್ಲೆಯಲ್ಲಿ ಮರಳು ಅಭಾವದಿಂದ ಅಭಿವೃದ್ದಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಒಪ್ಪಿಕೊಂಡಿರುವ ಗಣಿ ಮತ್ತು ಭೂ ವಿಜ್ಙಾನ ಸಚಿವ ರಾಜಶೇಖರ ಪಾಟೀಲ್ ಅವರು ಕರಾವಳಿ ಜಿಲ್ಲೆಯ ಸಿಆರ್ ಝಡ್ ನದಿ ಪಾತ್ರಗಳಲ್ಲಿ ಸ್ಥಳೀಯರಿಗೆ ಮರಳುಗಣಿಗಾರಿಗೆ ಮಾನವ ಶ್ರಮದಿಂದ ತೆರವುಗೊಳಿಸಲು ಅನಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಗುರುತಿಸಿರುವ ಮರಳು ಬ್ಲಾಕ್ ಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಂಪ್ರದಾಯಕವಾಗಿ ಮಾನವ ಶ್ರಮದಿಂದ ಮರಳುದಿಬ್ಬಗಳನ್ನು ತೆರವುಗೊಳಿಸುವ ವ್ಯಕ್ತಿಗೆ ಮಾತ್ರ ಇ-ಹರಾಜು ಮೂಲಕ ಮರಳುಗಾರಿಕೆಗುತ್ತಿಗೆ ನೀಡಲು ಅವಕಾಶ ನೀಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರ ಮತ್ತೊಂದು ಪ್ರಶ್ನೆಗೆ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಸಿಆರ್ ಝಡ್ ವ್ಯಾಪ್ತಿಯಲ್ಲಿ 76 ಮಂದಿಗೆ ಮರಳು ದಿಬ್ಬಗಳನ್ನು ತೆರವುಗೊಳಿಸಲು ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ.ನಾನ್ ಸಿಆರ್ ಝಡ್ ಪ್ರದೇಶದಲ್ಲಿ ಇ-ಟೆಂಡರ್,ಹರಾಜು ಪ್ರಕ್ರಿಯೆಯ ಮೂಲಕ ಗುತ್ತಿಗೆ ಮಂಜೂರು ಮಾಡಲಾಗಿದ್ದು,ದ.ಕ.ಜಿಲ್ಲೆಯಲ್ಲಿ ಈಗಾಗಲೇ ಎರಡು ಮರಳು ಬ್ಲಾಕ್ ಗಳು ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
Be the first to comment on "ಅಕ್ರಮ ಮರಳುಗಾರಿಕೆ: ಜಿಲ್ಲೆಯಲ್ಲಿ 30.76 ಲಕ್ಷ ರೂ ದಂಡ ವಸೂಲಿ"