ಮಂಗಳೂರು ಶಕ್ತಿನಗರದಲ್ಲಿರುವ ವಿಶೇಷ ಮಕ್ಕಳ ತರಬೇತಿ ಕೇಂದ್ರ ಅರಿವು ಟ್ರಸ್ಟ್, ಮಂಗಳೂರು ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ)ದ ಸಹೋದಯ ಮತ್ತು ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ವಿಶ್ವ ವಿಕಲಚೇತನ ಮಾಸಾಚರಣೆ ಮತ್ತು ಅರಿವು ವಾರ್ಷಿಕ ದಿನಾಚರಣೆ ಸಂಗಮ ಕಾರ್ಯಕ್ರಮ ಮಂಗಳವಾರ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳು ಪ್ರತಿಭಾಸಂಪನ್ನರಾಗಿದ್ದು, ಅರಿವು ಬಳಗ ಅವರಲ್ಲಿನ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಇಂಥ ಕೆಲಸಗಳನ್ನು ಮಾಡಬೇಕಾದರೆ ಶ್ರದ್ಧೆ ಮತ್ತು ಪ್ರಾಮಾಣಿಕತೆ ಅಗತ್ಯವಾದ ಕಾರಣ ಇದು ದೇವರ ಕೆಲಸವಾಗಿದ್ದು, ನಿಜವಾದ ದೇವರ ಸೇವೆ. ದ.ಕ., ಉಡುಪಿಯಲ್ಲಿ ಸ್ವಯಂಸೇವಾ ಸಂಸ್ಥೆಗಳು ವಿಶೇಷ ಮಕ್ಕಳಿಗೆ ನಿಸ್ವಾರ್ಥದಿಂದ ಶಿಕ್ಷಣ ನೀಡುತ್ತಿದ್ದು, ಪ್ರಾಮಾಣಿಕವಾದ ಕಾರ್ಯವನ್ನು ನೆರವೇರಿಸುತ್ತಿದ್ದಾರೆ ಎಂದರು.
ಸಂತ ಅಲೋಶಿಯಸ್ ಕಾಲೇಜು ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಶೈಕ್ಷಣಿಕ ಅರಿವು ಮೂಡಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಬೇಕು. ಆಗ ಸಮಾಜದ ಮುಖ್ಯವಾಹಿನಿಯಲ್ಲಿ ಅವರು ಆತ್ಮವಿಶ್ವಾಸದಿಂದ ಬದುಕಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದರು.
ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ವೈದ್ಯೆ ಡಾ.ಶ್ರೀದೇವಿ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಶಶಿಕಲಾ ಯು. ಶೆಟ್ಟಿ, ಎಂಸಿಎಫ್ ನ ಡಾ. ಯೋಗೀಶ್, ಅರಿವು ಟ್ರಸ್ಟ್ ಖಜಾಂಚಿ ಡಾ. ರಾಧಾಕೃಷ್ಣ ಬಿ. ಭಟ್, ಸಂತ ಅಲೋಶಿಯಸ್ ಕಾಲೇಜಿನ ಸೋಶಿಯಲ್ ವರ್ಕ್ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಶ್ವೇತಾ ರಸ್ಕಿನ್ಹ ಉಪಸ್ಥಿತರಿದ್ದರು. ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು.
ಅರಿವು ತರಬೇತಿ ಕೇಂದ್ರದ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಪ್ರಾಸ್ತಾವಿಕ ಮಾತನಾಡಿ, ಒಂದು ಮಗುವಿನಿಂದ ಆರಂಭಗೊಂಡ ಸಂಸ್ಥೆ ಇಂದು ಎಪ್ಪತ್ತು ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ನಾನಾ ರೀತಿಯ ತರಬೇತಿಗಳನ್ನು ಪಡೆಯುತ್ತಿದ್ದಾರೆ ಎಂದರು. ತರಬೇತಿ ಸಂಸ್ಥೆಯ ಸ್ವಪ್ನಾ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಭಿನ್ನ ಸಾಮರ್ಥ್ಯದ ಮಕ್ಕಳಿಂದ ನಾನಾ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸ್ತುತಗೊಂಡವು. ಯಕ್ಷಗಾನ, ಸಮೂಹ ನೃತ್ಯಗಳು, ರಾಷ್ಟ್ರೀಯ ಏಕತೆಯನ್ನು ಸಾರುವ ಮಿಲೇ ಸುರ್ ಮೇರಾ ತುಮಾರಾ ಹಾಡಿಗೆ ಭಿನ್ನ ಸಾಮರ್ಥ್ಯದ ಮಕ್ಕಳು ಹೆಜ್ಜೆ ಹಾಕಿ ಭಾವೈಕ್ಯತೆಯ ಸಂದೇಶ ಸಾರಿದರು. ಸುಶ್ಮಾ, ಅವಿನಾ, ಅಫ್ಸೀನ್ ಆಯೆಷಾ ಕಾರ್ಯಕ್ರಮಗಳನ್ನು ನಿರೂಪಿಸಿದರು.
Be the first to comment on "ವಿಶೇಷ ಮಕ್ಕಳೊಂದಿಗೆ ಬೆರೆಯುವುದು ದೇವರ ಕೆಲಸ: ಜೆ.ಆರ್. ಲೋಬೊ"