ಕನ್ನಡದ ಕಲ್ಹಣ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ವತಿಯಿಂದ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಯನ್ನು ಹಿರಿಯ ಸಾಹಿತಿ, ವಿಮರ್ಶಕ, ಅಂಕಣಕಾರ, ಚಿಂತಕ ವಿ.ಗ.ನಾಯಕ ಅವರಿಗೆ ನೀಡಲಾಗುವುದು.
ಡಿಸೆಂಬರ್ 15ರಂದು ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಭಿಮಾನಿ ಬಳಗದ ಅಧ್ಯಕ್ಷ ಬಿ.ತಮ್ಮಯ ತಿಳಿಸಿದ್ದಾರೆ.
ಮಧ್ಯಾಹ್ನ 3ರಿಂದ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ದೀಪಪ್ರಜ್ವಲನ ಮಾಡುವರು. ಅಧ್ಯಕ್ಷತೆಯನ್ನು ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಹಿಸುವರು. ನಿವೃತ್ತ ಪ್ರಾಂಶುಪಾಲ ಬೇ.ಸೀ.ಗೋಪಾಲಕೃಷ್ಣ ಪರಿಚಯ ಮತ್ತು ಅಭಿನಂದನೆ ನಡೆಸುವರು. ಗೌರವ ಅತಿಥಿಗಳಾಗಿ ತಾಲೂಕು 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ತುಕಾರಾಮ ಪೂಜಾರಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಭಾಗವಹಿಸುವರು ಎಂದು ಸಮಿತಿಯ ಕೋಶಾಧಿಕಾರಿ ಎನ್. ಗಂಗಾಧರ ಭಟ್ ಕೊಳಕೆ, ಕಸಾಪ ತಾಲೂಕು ಅಧ್ಯಕ್ಷ ಮೋಹನ ರಾವ್ ತಿಳಿಸಿದ್ದಾರೆ. ಅಂದು ಡಾ. ಪ್ರಮೀಳಾ ಕೊಳಕೆ ಮತ್ತು ಪಂಚಮಿ ಅವರಿಂದ ಹಾಡುಗಾರಿಕೆ ನಡೆಯಲಿದ್ದು, ಈ ಸಂದರ್ಭ ಕೊಳಲು ಸಂಗೀತ ವಿದ್ಯಾಲಯ ನಿರ್ದೇಶಕಿ ಮಂಜುಳಾ ಜಿ.ರಾವ್ ಉಪಸ್ಥಿತರಿರುವರು ಎಂದರು.
ದಿ.ನೀರ್ಪಾಜೆ ಭೀಮಭಟ್ಟರ ಜೊತೆ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿನಾಯಕ ಗಣಪತಿ ನಾಯಕ (ವಿ.ಗ.ನಾಯಕ) ಅಡ್ಯನಡ್ಕ ಜನತಾ ಪದವಿಪೂರ್ವ ವಿದ್ಯಾಲಯದಲ್ಲಿ ಅಧ್ಯಾಪಕರಾಗಿ ನಿವೃತ್ತರಾದವರು. ಕವಿ, ಸಂಶೋಧಕ, ವಿಮರ್ಶಕರಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿರುವ ಅವರು, ಹಲವು ಕೃತಿಗಳನ್ನು ರಚಿಸಿದ್ದಾರೆ. ಹಲವು ಪುರಸ್ಕಾರ, ಸನ್ಮಾನ, ಸಾಹಿತ್ಯ ಸಮ್ಮೇಳನಗಳ ಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ವಿ.ಗ.ನಾಯಕರ ‘ಪ್ರತಿಸ್ಪಂದನ’ ಕೃತಿಗೆ ವರ್ಧಮಾನ ಪ್ರಶಸ್ತಿ ದೊರಕಿದೆ. 2004ರಲ್ಲಿ ‘ಹೊನ್ನೂರುಜಾಜಿ’ ಮತ್ತು 2006 ರಲ್ಲಿ ‘ನಾವಿಕ’ ಎಂಬ ಎರಡು ಅಭಿನಂದ ಗ್ರಂಥಗಳನ್ನೂ ಅಭಿಮಾನಿಗಳು ಅವರಿಗೆ ಅರ್ಪಿಸಿದ್ದಾರೆ.
Be the first to comment on "ವಿ.ಗ.ನಾಯಕರಿಗೆ ನೀರ್ಪಾಜೆ ಪ್ರಶಸ್ತಿ, ಡಿ.15ರಂದು ಪ್ರದಾನ"