ಬಂಟ್ವಾಳದಲ್ಲಿ ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಮತ್ತು ಬೇಬಿ ಕುಂದರ್ ಪದಗ್ರಹಣ ಮತ್ತು ಕಾರ್ಯಕರ್ತರ ಸಭೆ ಗುರುವಾರ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಪಕ್ಷ ಮತ್ತು ತನ್ನ ವಿರುದ್ಧ ಸತತ ಅಪಪ್ರಚಾರಗಳನ್ನು ನಡೆಸಿಕೊಂಡು ಬರುತ್ತಿದ್ದು, ವೈಯಕ್ತಿಕ ಮಟ್ಟದಲ್ಲಿ ದಾಳಿ ನಡೆಸುತ್ತಿದ್ದಾರೆ. ಆದರೆ ತಾನು ಎದೆಗುಂದದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿಯುತ್ತೇನೆ, ಅಪಪ್ರಚಾರಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಕಾಂಗ್ರೆಸ್ ಗೆ ಇದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಅನನ್ಯತೆ ಉಳಿಸಲು ಕರಾವಳಿಯಲ್ಲಿ ಕಾಂಗ್ರೆಸ್ ಸಂಸದರು ಆಯ್ಕೆಯಾಗುವುದು ಬಹುಮುಖ್ಯ. ಬಿಜೆಪಿ ಭಾವನೆಗಳ ದುರುಪಯೋಗ ಮಾಡುತ್ತಿದೆ. ಅವಿಭಜಿತ ಜಿಲ್ಲೆಗಳ ಜನರ ಸ್ವಾಭಿಮಾನಕ್ಕೆ ಕೇಂದ್ರ ಸರಕಾರ ಧಕ್ಕೆ ತರುತ್ತಿದೆ. ವಿಜಯಾ ಬ್ಯಾಂಕ್ ವಿಲೀನ ಮಾಡುವ ಮೂಲಕ ಬ್ಯಾಂಕ್ ಸಿಬ್ಬಂದಿಗೂ ಅವಮಾನ ಮಾಡುತ್ತಿದೆ. ಇಂದು ಸಂವಿಧಾನ ಅಪಾಯದಲ್ಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ದೇಶ ಗಂಡಾಂತರದಿಂದ ಪಾರಾಗಬಹುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಇಂದು ಬಿಜೆಪಿ ಮುಕ್ತ ಮಾಡಲು ಮತದಾರರು ಸಜ್ಜಾಗಿದ್ದಾರೆ. ಕರ್ನಾಟಕದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಗಳು ಸಿದ್ದರಾಮಯ್ಯ ಅವರ ಮುಖ್ಯ ಮಂತ್ರಿ ಅವಧಿಯಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಬಂಟ್ವಾಳ ಕಂಡಿದೆ ಎಂದರು.
ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಕರ್ನಾಟಕದಲ್ಲಿ ಬಂಟ್ವಾಳ ವನ್ನು ಮಾದರಿ ಕ್ಷೇತ್ರವಾಗಿ ಮಾಡಿದ ಕೀರ್ತಿ ರೈ ಅವರಿಗೆ ಸಲ್ಲುತ್ತದೆ.ಸೋಲಿಗೆ ಕಾರಣವೇನು ಎಂದು ಆತ್ಮವಲೋಕನ ಮಾಡಬೇಕಾಗಿದೆ. ಅಪಪ್ರಚಾರ ವಿರುದ್ಧ ಸಿಡಿದೇಳುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದರು.
ಅಧಿಕಾರ ಸ್ವೀಕರಿಸಿದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ತಾಳ್ಮೆ ಕಳೆದುಕೊಳ್ಳುವಂತೆ ಮಾಡಬೇಡಿ. ಗಾಜಿನ ಮನೆಯಲ್ಲಿ ಕುಳಿತು ಟೆರೇಸ್ ಮನೆಗೆ ಕಲ್ಲೆಸೆಯಬೇಡಿ ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುದೀಪ್ ಕುಮಾರ್ ಶೆಟ್ಟಿ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ತನ್ನನ್ನು ಬ್ಲಾಕ್ ಅಧ್ಯಕ್ಷತೆಗೆ ನಿಯುಕ್ತಿ ಮಾಡಿದ್ದು, ಕಾರ್ಯಕರ್ತರೊಂದಿಗೆ ಬೆರೆತು ಕಾರ್ಯನಿರ್ವಹಿಸುತ್ತೇನೆ ಎಂದರು.
ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಪ.ಜಾತಿ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ, ಪಾಣೆಮಂಗಳೂರು ಬ್ಲಾಕ್ ಉಸ್ತುವಾರಿ ಅಬ್ದುಲ್ ರವೂಫ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿಪಂ ಸದಸ್ಯರಾದ ಪದ್ಮಶೇಖರ ಜೈನ್, ಮಂಜುಳಾ ಮಾವೆ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಬಂಟ್ವಾಳ ಅಧ್ಯಕ್ಷ ಪ್ರಶಾಂತ್ ಕುಲಾಲ್, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಆಲ್ಪರ್ಟ್ಗ ಮಿನೇಜಸ್, ಪ್ರಮುಖರಾದ ಸುದರ್ಶನ ಜೈನ್, ಸಂಜೀವ ಪೂಜಾರಿ, ಜನಾರ್ದನ ಚಂಡ್ತಿಮಾರ್, ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು.
ಇದೇ ವೇಳೆ ನೂತನ ಅಧ್ಯಕ್ಷರಾದ ಬಂಟ್ವಾಳ ಬ್ಲಾಕ್ ನ ಬೇಬಿ ಕುಂದರ್ ಮತ್ತು ಪಾಣೆಮಂಗಳೂರು ಬ್ಲಾಕ್ ನ ಸುದೀಪ್ ಕುಮಾರ್ ಶೆಟ್ಟಿ ಅವರಿಗೆ ನಿರ್ಗಮನ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್ ಮತ್ತು ಅಬ್ಬಾಸ್ ಆಲಿ ಅಧಿಕಾರ ಹಸ್ತಾಂತರಿಸಿದರು. ನಿರ್ಗಮನ ಅಧ್ಯಕ್ಷರು ಮತ್ತು ಪುರಸಭಾ ಸದಸ್ಯರನ್ನು ಗೌರವಿಸಲಾಯಿತು. ಅಬ್ಬಾಸ್ ಆಲಿ ಸ್ವಾಗತಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ರಾಜೀವ ಕಕ್ಯಪದವು ವಂದಿಸಿದರು.
Be the first to comment on "ದ.ಕ. ಅನನ್ಯತೆ ಉಳಿಸಲು ಕಾಂಗ್ರೆಸ್ ಗೆಲುವು ಅವಶ್ಯ – ಬ್ಲಾಕ್ ಕಾಂಗ್ರೆಸ್ ಪದಗ್ರಹಣದಲ್ಲಿ ಕರೆ"