ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂಬುದು ಗಮನದಲ್ಲಿರಲಿ, ಗ್ರಾಪಂ ಅಧ್ಯಕ್ಷರಿಗೆ ಗೈಡ್ ಮಾಡಿ, ಓವರ್ ಟೇಕ್ ಮಾಡಲು ಹೋಗಬೇಡಿ, ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಲಹೆ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಿಸಿರೋಡಿನ ಎಸ್.ಜಿ.ಆರ್.ಎಸ್.ವೈ.ಸಭಾಂಗಣದಲ್ಲಿ ಗ್ರಾಮ ಮಟ್ಟದ ಅಧಿಕಾರಿಗಳು ಹಾಗೂ ಗ್ರಾ.ಪಂ.ಅಧ್ಯಕ್ಷರುಗಳ ವಿಶೇಷ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಂಚಾಯತ್ ಅದ್ಯಕ್ಷ ರುಗಳು ಮತ್ತು ಅಧಿಕಾರಿಗಳ ಜೊತೆ ಸಂವಹನ ಕೊರತೆಯನ್ನು ನೀಗಿಸಲು ತಹಶೀಲ್ದಾರ್ ಸಹಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದ ಅವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಹೊಂದಾಣಿಕೆ ಕೊರತೆಯಾದರೆ ಜನರು ಬಸವಳಿಯಬೇಕಾಗುತ್ತದೆ ಎಂದರು.
ಅಧಿಕಾರಿಗಳು ಗ್ರಾ.ಪಂ.ಜನಪ್ರತಿನಿಧಿಗಳೊಂದಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಂಥ ಅಧಿಕಾರಿಗಳ ವಿರುದ್ದ ಲಿಖಿತ ವಾಗಿ ಮೇಲಾಧಿಕಾರಿಗಳಿಗೆ ದೂರು ನೀಡಿ, ಇಲ್ಲಿ ಜನರ ಸಮಸ್ಯೆಗಳು ಪರಿಹಾರ ಆಗಬೇಕು, ಅಧಿಕಾರಿಗಳು ಉದಾಸೀನ ಮನೋಭಾವದಿಂದ ಹೊರಬರಬೇಕು ಎಂದು ಶಾಸಕರು ಸ್ಪಷ್ಟಪಡಿಸಿದರು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ವಸತಿನಿವೇಶನ ಹಾಗೂ ಸ್ಮಶಾನ ಕ್ಕೆ ಜಮೀನು ಮೀಸಲಿಡಬೇಕು ಎಂದ ಶಾಸಕ, ಯಾವ ಪಂಚಾಯತ್ ಗಳಲ್ಲಿ ಸಮಸ್ಯೆ ಗಳಿದೆ ಅಂತಹ ಪಂಚಾಯತ್ ಗಳ ಜೊತೆ ಅಧಿಕಾರಿಗಳು ಸ್ಪಂದಿಸಿ, ಸರ್ವೆ ಕಾರ್ಯ ಶೀಘ್ರವಾಗಿ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದರು.
ಸ್ಮಶಾನಗಳ ಬಗ್ಗೆ ಜನರಿಗೆ ಇರುವ ಭಯವನ್ನು ನಿವಾರಿಸಿ, ಅದನ್ನು ಸುಂದರಗೊಳಿಸಿ ಮುಕ್ತಿಧಾಮ ರೀತಿಯಲ್ಲಿ ನಿರ್ಮಿಸಿ, ಇದಕ್ಕೆ ಅನುದಾನಗಳು ಲಭ್ಯವಿದ್ದು, ಸಮಸ್ಯೆಗಳಿದ್ದರೆ ವರದಿ ನೀಡಿ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಹೇಳಿದರು.
ಕೋಳಿತ್ಯಾಜ್ಯ ಎಸೆಯುವುದು, ಸಿಸಿ ಕ್ಯಾಮರಾವನ್ನೂ ಕದ್ದುಕೊಂಡು ಹೋಗುವುದು, ಸ್ಮಶಾನ, ಅಂಗನವಾಡಿ, ರಸ್ತೆ ಸಮಸ್ಯೆಗೆ ಇರುವ ತಕರಾರುಗಳ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭ ಮಾತನಾಡಿದ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರಶೆಟ್ಟಿ, ತಾಲೂಕು ಕಚೇರಿಯಲ್ಲಿ ಕಡತಗಳು ನಾಪತ್ತೆಯಾಗುತ್ತವೆ ಎಂದು ದೂರಿದರು. ನಿವೇಶನ ಆಯ್ಕೆ ಮಾಡಿ ತಡ ಮಾಡುವ ಬದಲು ಹಕ್ಕುಪತ್ರಗಳ ತ್ವರಿತ ವಿಲೇವಾರಿ ಆಗಬೇಕು ಎಂದು ಕುಕ್ಕಿಪ್ಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಆಗ್ರಹಿಸಿದರು. ಗ್ರಾಪಂ ಆರ್.ಟಿ.ಸಿ. ಆಗದ ಮೂರು ಪಂಚಾಯತ್ ಗಳ ದಾಖಲೆಗಳನ್ನು ಡಿ.5ರೊಳಗೆ ಸಲ್ಲಿಸಬೇಕು ಎಂದು ಇಒ ಹೇಳಿದರು. ಇರಾ ಗ್ರಾಮದ ಸಮಸ್ಯೆಗಳ ಕುರಿತು ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ವಿವರಿಸಿದರು.
ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಬಂಗೇರ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ,ವಂದಿಸಿದರು. ತಾಲೂಕಿನ 58 ಗ್ರಾಪಂಗಳ ಪಿಡಿಒ, ಕಾರ್ಯದರ್ಶಿಗಳು, ಗ್ರಾಮಕರಣಿಕರು,ರೆವೆನ್ಯೂ ಇನ್ಸ್ ಪೆಕ್ಟರ್ ಗಳು, ಸರ್ವೇ ಇಲಾಖೆಯ ಅಧಿಕಾರಿಗಳು, ಅಧ್ಯಕ್ಷರುಗಳು ಉಪಸ್ಥಿತರಿದ್ದು, ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಹಿತಿ ನೀಡಿದರಲ್ಲದೆ ,ಕೆಲ ಸಮಸ್ಯಗಳನ್ನು ಸಭೆಯ ಗಮನಕ್ಕೆ ತಂದರು.
Be the first to comment on "ಗ್ರಾಪಂ ಅಧ್ಯಕ್ಷರಿಗೆ ಗೈಡ್ ಮಾಡಿ, ಓವರ್ ಟೇಕ್ ಮಾಡಬೇಡಿ – ಅಧಿಕಾರಿಗಳಿಗೆ ಶಾಸಕ ಸಲಹೆ"