ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿರುವ ಹಿನ್ನೆಲೆಯಲ್ಲಿ ಮೂರು ದಿನ ಶೋಕಾಚರಣೆಯನ್ನು ಸರಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲ ಸರಕಾರಿ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.
ಇಂದು ಭಾನುವಾರ ಬೆಳಗ್ಗೆ 11.30ಕ್ಕೆ ತಾಲೂಕು ಕಚೇರಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಕಂದಾಯ ಇಲಾಖೆ ಮತ್ತು ಪುರಸಭೆ ಬಂಟ್ವಾಳ ಆಯೋಜನೆಯಲ್ಲಿ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ಸಮಾರಂಭ ಮತ್ತು ಇಂದಿರಾ ಕ್ಯಾಂಟೀನ್ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಿಗದಿಯಾಗಿತ್ತು. ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಇಲ್ಲಿ ಭಾಗವಹಿಸುವವರಿದ್ದರು.
ಆದರೆ ಅಂಬರೀಷ್ ನಿಧನ ಹಿನ್ನೆಲೆಯಲ್ಲಿ ಅವರ ಗೌರವಾರ್ಥ ಶೋಕಾಚರಣೆಯನ್ನು ಘೋಷಿಸಿದ ಕಾರಣ ಸರಕಾರಿ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಬಂಟ್ವಾಳನ್ಯೂಸ್ ಗೆ ತಿಳಿಸಿದ್ದಾರೆ.
ಅಂಬರೀಶ್ ಅವರ ಮೂಲ ಹೆಸರು ಅಮರನಾಥ್. ತಂದೆ ಹುಚ್ಚೇಗೌಡ. ತಾಯಿ ಪದ್ಮಾವತಮ್ಮ. ಅವರು ಜನಿಸಿದ್ದು ಮೇ 29, 1952ರಲ್ಲಿ. ಅವರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಅವರ ಮೊದಲ ಚಿತ್ರ. ಈಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತೋ ಅವರ ಕೊನೆ ಸಿನಿಮಾ.
ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅಂಬರೀಶ್, ಕಾವೇರಿ ವಿವಾದದ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ ಅವರು, ಈ ಬಾರಿ ವಿಧಾನಸಭೆಗೆ ಸ್ಪರ್ಧೆ ಮಾಡಿರಲಿಲ್ಲ.
Be the first to comment on "ಅಂಬರೀಶ್ ನಿಧನ: ಬಂಟ್ವಾಳದ ಇಂದಿರಾ ಕ್ಯಾಂಟೀನ್ ಉದ್ಘಾಟನೆ, 94ಸಿ ವಿತರಣೆ ಕಾರ್ಯಕ್ರಮ ಮುಂದಕ್ಕೆ"