ಮರಳು ಸಮಸ್ಯೆ, ಅಡಕೆ ಬೆಳೆಗಾರರಿಗೆ ದೊರಕದ ಪರಿಹಾರ, ಭೂಪರಿವರ್ತನೆಯ ಕಾರ್ಯ ಸ್ಥಗಿತಗೊಂಡ ವಿಚಾರಕ್ಕೆ ಸಂಬಂಧಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿಜೆಪಿ ಶನಿವಾರ ದಿನವಿಡೀ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದೆ.
ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ತಾನು ಶಾಸಕನಾಗಿ ಆಯ್ಕೆಯಾದ ಬಳಿಕ ಕೆಲಸ ಕಾರ್ಯಗಳನ್ನು ನಡೆಸಲು ತೊಡಕುಂಟಾಗುತ್ತಿದ್ದು, ಉದ್ದೇಶಪೂರ್ವಕವಾಗಿ ಅಡ್ಡಿ ಮಾಡಲಾಗುತ್ತಿದೆ. ಪ್ರತಿಭಟನೆಯನ್ನು ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ವಿಷಾದಿಸಿ, ರಾಜ್ಯ ಸರಕಾರದ ವಿಳಂಬ ನೀತಿ ಹಾಗೂ ನಿರ್ಲಕ್ಷ್ಯ ಧೋರಣೆಯಿಂದ ಸಮಸ್ಯೆಗಳು ಉಲ್ಬಣವಾಗುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಮಾತನಾಡಿ, ಮರಳು ಸಮಸ್ಯೆ ಇಂದು ಬಂಟ್ವಾಳದಲ್ಲಿ ನಿರ್ಮಾಣವಾಗಲು ಮಾಜಿ ಸಚಿವ ಬಿ.ರಮಾನಾಥ ರೈ ಅವರೇ ಕಾರಣ ಎಂದು ಆಪಾದಿಸಿದರು.
ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮಾತನಾಡಿ ಮರಳುಗಾರಿಕೆ ರಾತ್ರಿ ವೇಳೆ ಅವ್ಯಾಹತವಾಗಿ ಸಾಗುತ್ತಿದ್ದು ಅದರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಪಕ್ಷ ಪ್ರಮುಖರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಪಕ್ಷ ಪ್ರಮುಖರಾದ ಜಿ.ಆನಂದ, ಸರಪಾಡಿ ಅಶೋಕ್ ಶೆಟ್ಟಿ, ಸಂಜೀವ ಪೂಜಾರಿ, ಪ್ರವೀಣ್ ತುಂಬೆ, ಪುರುಷೋತ್ತಮ ಪೂಜಾರಿ ಸರಪಾಡಿ, ಬಬಿತಾ ಕೋಟ್ಯಾನ್, ಎ.ಗೋವಿಂದ ಪ್ರಭು, ಪ್ರಭಾಕರ ಪ್ರಭು, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ನಂದರಾಮ ರೈ, ತನಿಯಪ್ಪ ಗೌಡ, ಯಶೋಧರ ಕರ್ಬೆಟ್ಟು, ಪ್ರಕಾಶ್ ಅಂಚನ್, ನಾರಾಯಣ ಪೂಜಾರಿ ಬೊಳ್ಳುಕಲ್ಲು ಮೊದಲಾದವರು ಉಪಸ್ಥಿತರಿದ್ದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಮೋನಪ್ಪ ದೇವಸ್ಯ ವಂದಿಸಿದರು.
ಬಂಟ್ವಾಳ ತಾಲೂಕಿನಾಂದ್ಯಂತ ಕಳೆದ ಹಲವಾರು ಸಮಯಗಳಿಂದ ಮರಳಿನ ಸಮಸ್ಯೆ ಇದ್ದು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಮರಳಿನ ಸಮಸ್ಯೆಯಿಂದಾಗಿ ಅನೇಕ ವಸತಿ ಯೋಜನೆಗಳ ಫಲಾನುಭವಿಗಳು ಮನೆ ಕಟ್ಟಲಾಗದ ಸ್ಥಿತಿ, ಕಟ್ಟಡ ಕಾರ್ಮಿಕರು, ಗುತ್ತಿಗೆದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ ದಿನನಿತ್ಯ ಅಕ್ರಮ ಮರಳು ಸಾಗಟ ನಿರಂತರವಾಗಿ ನಡೆಯುತ್ತಿದೆ. ಈ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿಯ ಮೂಲಕ ಜನಸಾಮಾನ್ಯರಿಗೆ ಕನಿಷ್ಠ ದರದಲ್ಲಿ ಮರಳು ಸಿಗುವ ವ್ಯವಸ್ಥೆಗೆ ಜಿಲ್ಲಾಡಳಿತ ತಕ್ಷಣ ವ್ಯವಸ್ಥೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ಅಡಿಕೆ ಬೆಳೆಗಾರರು ಅಡಿಕೆ ಕೊಳರೋಗದಿಂದಾಗಿ ತೀವ್ರ ನಷ್ಟ ಅನುಭವಿಸಿದ್ದು ಈಗಾಗಲೇ ಸರ್ವೇ ಕಾರ್ಯ ನಡೆಸಲಾಗಿದ್ದರೂ ಸರ್ವೇ ಕಾರ್ಯ ಪರಿಪೂರ್ಣವಾಗಲ್ಲಿ ತಕ್ಷಣ ಸಮರ್ಪಕವಾಗಿ ಸರ್ವೇ ಕಾರ್ಯ ನಡೆಸುವುದು ಹಾಗೂ ಕೊಲೆರೋಗದಿಂದ ಸಂಕಷ್ಟಕ್ಕೀಡಾದ ರೈತರಿಗೆ ಸೂಕ್ತ ಪರಿಹಾರ ವಿತರಣೆ ಮಾಡಬೇಕು. ಭೂಪರಿವರ್ತನೆಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಕಠಿಣ ನಿಯಮಗಳಿಂದಾಗಿ ಸಮಸ್ಯೆಗಳಾಗಿವೆ. ಭೂ ಪರಿರ್ವತನೆಯ ನಿಯಮವನ್ನು ಸರಳೀಕರಣಗೊಳಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.
Be the first to comment on "ಶಾಸಕನಾದ ಬಳಿಕ ಅಭಿವೃದ್ಧಿ ಕಾರ್ಯಗಳಿಗೆ ಉದ್ದೇಶಪೂರ್ವಕ ಅಡ್ಡಿ: ರಾಜೇಶ್ ನಾಯ್ಕ್"