ಎಚ್1ಎನ್1 ಬಾಧಿತರಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಸಜಿಪನಡು ನಿವಾಸಿ ಝುಬೀನಾ ಮಂಗಳವಾರ ಮುಂಜಾನೆ ಮೃತಪಟ್ಟಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ. ತಾಲೂಕಿನ ಬೇರಾವುದೇ ಭಾಗಗಳಲ್ಲಿ ಎಚ್೧ಎನ್೧ ಸೋಂಕು ಇಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ದೀಪಾ ಪ್ರಭು ಸ್ಪಷ್ಟಪಡಿಸಿದ್ದಾರೆ.
ಅವ್ವಮ್ಮ ಹಾಗೂ ಝಬೀನಾ ಅವರು ಎಚ್1ಎನ್1 ಬಾಧಿತರಾಗಿ ಮೃತಪಟ್ಟಿರುವುದಾಗಿ ಈಗಾಗಲೇ ದೃಢಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರು ಹೇಳಿದರು.
ಎಚ್1ಎನ್1 ಪ್ರಕರಣದ ಬಗ್ಗೆ ತಾಲೂಕು ಆರೋಗ್ಯ ಆಡಳಿತಕ್ಕೆ ಅ.6ರಂದು ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾಗಿ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ಅದೇ ದಿನದಂದು ಸಜಿಪನಡು ಸುತ್ತಮುತ್ತಲ ಸುಮಾರು 60 ಮನೆಗಳಿಗೆ ಭೇಟಿ ನೀಡಿ, ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಅಲ್ಲದೆ, ಕರಪತ್ರಗಳನ್ನು ಹಂಚಿ, ರೋಗದ ಬಗ್ಗೆ ಮಾಹಿತಿ ನೀಡಿದ್ದೇವೆ. ಆರೋಗ್ಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಎರಡು ದಿನಗಳ ಕಾಲ ಸರ್ವೇ ಕಾರ್ಯ ಮಾಡಿದ್ದೇವೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಗಿದೆ. ಅದಲ್ಲದೆ, ನಿನ್ನೆಯ ದಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಶಿಬಿರವನ್ನು ಏರ್ಪಡಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಗ್ರಾಮವಾಸಿಗಳಲ್ಲಿ ಸೋಂಕು ತಗಲಿರುವ ಹಾಗೂ ರೋಗದ ಲಕ್ಷಣ ಪತ್ತೆಯಾಗಿಲ್ಲ. ಗ್ರಾಮಸ್ಥರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾಹಿತಿ ನೀಡಿದ್ದಾರೆ.
ಏನಾಗಿದೆ:
ಎಚ್1ಎನ್1 ಬಾಧಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ದಿವಂಗತ ಮಯ್ಯದ್ದಿ ಅವರ ೨ನೆ ಪುತ್ರಿ ಝಬೀನಾ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಮೃತಪಟ್ಟರು.
ಝಬೀನಾ ಅವರ ತಾಯಿ ಅವ್ವಮ್ಮ ಅ. 10ರಂದು ಎಚ್1ಎನ್1 ಬಾಧಿತರಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇದೀಗ ಎಚ್1ಎನ್1 ಒಂದೇ ಮನೆಯ ಇಬ್ಬರನ್ನು ಬಲಿತೆಗೆದುಕೊಂಡಿದೆ.
ಕಳೆದ ಏಳೆಂಟು ತಿಂಗಳುಗಳಿಂದ ಅನಾರೋಗ್ಯದ ಬಳಲುತ್ತಿದ್ದ ಮನೆಯ ಯಜಮಾನ ಮಯ್ಯದ್ದಿ ಅ. 1ರಂದು ಮೃತಪಟ್ಟಿದ್ದರು. ಮಯ್ಯದ್ದಿ ಅವರಿಗೆ ನಾಲ್ಕು ಮಕ್ಕಳಲ್ಲಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು. ಇಬ್ಬರು ಹೆಣ್ಣು ಮಕ್ಕಳಲ್ಲಿ ಮಂಗಳವಾರ ಮೃತಪಟ್ಟ ಝಬೀನಾ ಎರಡನೇಯವರು.
ಝಬೀನಾ ಅವರ ನವಜಾತ ಶಿಶು ಅ .4ರಂದು ಕೊನೆಯುಸಿರೆಳೆದಿತ್ತು. ಎಚ್1ಎನ್1 ಬಾಧಿತ ಮಯ್ಯದ್ದಿ ಅವರ ಪತ್ನಿ ಅವ್ವಮ್ಮ ಅ. 10ರಂದು ಮೃತಪಟ್ಟಿದ್ದಾರೆ. ಒಂದೇ ಮನೆಯ ತಾಯಿ-ಮಗಳನ್ನು ಬಲಿತೆಗೆದುಕೊಂಡಿರುವುದು ಖೇದಕರ. ಮೃತರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡುವಂತೆ ಸಜೀಪನಡು ಗ್ರಾಪಂ ಅಧ್ಯಕ್ಷ ನಾಸಿರ್ ಒತ್ತಾಯಿಸಿದ್ದಾರೆ.
Be the first to comment on "ಎಚ್1ಎನ್1ಗೆ ಮತ್ತೊಂದು ಬಲಿ: ಆತಂಕ ಬೇಡ ವೈದ್ಯಾಧಿಕಾರಿ"