ಹಿಮ್ಮೇಳ ವಾದನದಲ್ಲಿ ಹೆಸರುಗಳಿಸಿದ್ದ ದಿವಾಣ ಭೀಮ ಭಟ್ ಸ್ಮರಣೆಗೋಸ್ಕರ ಸ್ಥಾಪಿಸಿದ ದಿವಾಣ ಪ್ರಶಸ್ತಿಯನ್ನು ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ಅವರಿಗೆ ಕೋಡಪದವಿನಲ್ಲಿ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೋಡಪದವು ಶ್ರೀ ವೀರಾಂಜನೇಯ ಸ್ವಾಮೀ ಪ್ರತಿಷ್ಠಾನ ಯಕ್ಷಕಲಾ ವಿಶ್ವಸ್ತ ಮಂಡಳಿ ವತಿಯಿಂದ ಶರನ್ನವರಾತ್ರಿ ಮಹೋತ್ಸವ, ಯಕ್ಷಗಾನ ಪ್ರದರ್ಶನ ಸಂದರ್ಭ ದಿವಾಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷಗಾನಕ್ಕೆ ಅಪಾರ ಗೌರವವಿದೆ. ಯಕ್ಷಗಾನದಲ್ಲಿ ಸಜ್ಜನಿಕೆಯ ಗುಣ ಅಡಗಿಕೊಂಡಿದೆ. ಕಲೆಗೆ ಯಾವುದೇ ಜಾತಿ ಧರ್ಮ ಭೇದಭಾವ ಇಲ್ಲ. ಸಾಧಕರನ್ನು ಗುರುತಿಸುವುದು ಆರೋಗ್ಯಕರ ಲಕ್ಷಣವಾಗಿದೆ. ಕಲಾವಿದರನ್ನು ವಿಕೃತ ಮನೋಭಾವದಿಂದ ನೋಡುವುದು ಆರೋಗ್ಯಕರ ಲಕ್ಷಣವಲ್ಲ ಎಂದರು.
ಅಭಿನಂದನಾ ಭಾಷಣ ಮಾಡಿದ ಶ್ರೀ ಧರ್ಮಸ್ಥಳ ಮೇಳದ ಭಾಗವತರೂ ಆಗಿರುವ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ, ದಿವಾಣ ಪ್ರಶಸ್ತಿಗೆ ಪದ್ಯಾಣ ಭಾಗವತರು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದರು. ಕಿಶನ್ ಕುಮಾರ್ ನಿಟಿಲೆ ಉಪಸ್ಥಿತರಿದ್ದರು. ನವರಾತ್ರಿ ಹಿನ್ನೆಲೆಯಲ್ಲಿ ಬೆಳಿಗ್ಗೆ ಪಂಚಾಮೃತ, ಸೀಯಾಳ ಅಭಿಷೇಕ, ಹರಕೆ ಸಮರ್ಪಣೆ, ಮಹಾಮಂಗಳಾರತಿ ನಡೆಯಿತು. ಬಾಯಾರು ಶ್ರೀ ಪಂಚಲಿಂಗೇಶ್ವರ ಯಕ್ಷಕಲಾವೃಂದ ದಿಂದ ಯಕ್ಷಗಾನ ಪ್ರದರ್ಶನ-ಬಾಲಪ್ರತಿಭಾದರ್ಶನ ನಡೆಯಿತು. ಗೋವಿಂದ ಭಟ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ ಪ್ರಸ್ತಾವನೆ ಮಾಡಿದರು. ಹಿರಣ್ಯ ವೆಂಕಟೇಶ್ವರ ಭಟ್ ನಿರೂಪಿಸಿದರು. ಸಿ.ಎಚ್ ಸುಬ್ರಹ್ಮಣ್ಯ ಭಟ್ ವಂದಿಸಿದರು. ಪುರಂದರ ವಿಠಲ ಕುಕ್ಕಿಲ ಸನ್ಮಾನ ಪತ್ರ ಓದಿದರು.
Be the first to comment on "ಪದ್ಯಾಣ ಭಾಗವತರಿಗೆ ದಿವಾಣ ಪ್ರಶಸ್ತಿ ಪ್ರದಾನ"