ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ 94ಸಿ ಹಕ್ಕುಪತ್ರ ನೀಡುವ ಪರಿಕಲ್ಪನೆಯಿಂದ ಬಡವರಿಗೆ ಲಾಭವಾಗುತ್ತಿದೆ. ಇಂಥ ಜನಪರ ಯೋಜನೆ ಮತ್ತಷ್ಟು ಜಾರಿಗೊಳ್ಳಲಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಕೊಳ್ನಾಡು-ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಕೊಳ್ನಾಡು ಗ್ರಾಮ ಪಂಚಾಯತ್ ಆಶ್ರಯದಲ್ಲಿ 94ಸಿ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಿದ ಬಳಿಕ ಅವರು ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯು ನೆಮ್ಮದಿಯಿಂದ ಗೌರವದಿಂದ ಬದುಕು ಸಾಗಿಸುವಂತಾಗಲಿ ಎಂದು ಹೇಳಿದ ಅವರು, ದೀರ್ಘಕಾಲದಿಂದ ಬಾಕಿ ಉಳಿದಿದ್ದ ಸರಕಾರದ ವಿವಿಧ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಾ.ಪಂ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ದಿವಾಕರ ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು. ಅನಿಲ್ ಕುಮಾರ್ ಸ್ವಾಗತಿಸಿ, ಫಲಾನುಭವಿಗಳ ಪಟ್ಟಿ ವಾಚಿಸಿದರು. ಕೊಳ್ನಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧೀರ್ ಕುಮಾರ್ ವಂದಿಸಿದರು. ಕೊಳ್ನಾಡು ಮಹಾಶಕ್ತಿ ಕೇಂದ್ರ ಅಧ್ತಕ್ಷರಾದ ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು.
Be the first to comment on "94ಸಿ ಹಕ್ಕುಪತ್ರದಿಂದ ಬಡವರಿಗೆ ಲಾಭ: ಶಾಸಕ ರಾಜೇಶ್ ನಾಯ್ಕ್"