ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ., ತಾಲೂಕಿನ ರೈತರಿಗೆ ದೀರ್ಘಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡುತ್ತಿದ್ದು, ಈ ಸಾಲಿನಲ್ಲಿ ಒಟ್ಟು ಶೇ.84.62 ವಸೂಲಿ ಸಾಧನೆ ಮಾಡಿದ್ದು, ದ.ಕ. ಜಿಲ್ಲೆಯಲ್ಲಿ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್ ಹೇಳಿದ್ದಾರೆ.
ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.೬.೪ ಮತ್ತು 3 ಬಡ್ಡಿ ರಿಯಾಯಿತಿ ದರದಲ್ಲಿ ಪಡೆದ ಸಾಲದ ಕಂತನ್ನು ಬ್ಯಾಂಕಿನ ಸದಸ್ಯರು ಸಕಾಲದಲ್ಲಿ ಮರುಪಾವತಿಸಿರುವುದರಿಂದ ೨೦೧೭-೧೮ರ ಆರ್ಥಿಕ ವರ್ಷದಲ್ಲಿ ನಮ್ಮ ಬ್ಯಾಂಕ್ ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ ಎಂದು ವಿವರಿಸಿದ ಅವರು, .ರಾ.ಸ.ಕೃ ಮತ್ತು ಗ್ರಾ.ಅ.ಬ್ಯಾಂಕ್ ಬೆಂಗಳೂರು ಇದರ ಮಹಾಸಭೆಯಲ್ಲಿ ದ.ಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ನೀಡಿ ಗೌರವಿಸಿದೆ ಎಂದರು.
೨೦೧೮-೧೯ ನೇ ಸಾಲಿನಲ್ಲಿ ಬ್ಯಾಂಕ್ ತನ್ನ ಕಾರ್ಯಕ್ಷೇತ್ರಗಳ ಎಲ್ಲಾ ಗ್ರಾಮಗಳ ರೈತರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ನೋಂದಾಯಿಸಿ, ಸರಕಾರ ಘೋಷಿಸಿದ ಶೇ.೩ ಬಡ್ಡಿದರದ ಕೃಷಿ ಆಧಾರಿತ ಸಾಲಗಳಾದ ನೀರಾವರಿ, ತೋಟಗಾರಿಕಾ ಯೋಜನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕೃಷಿ ಯಾಂತ್ರೀಕರಣ, ಗೊಬ್ಬರ ಅನಿಲ ಸ್ಥಾವರ, ಅಡಿಕೆ ಉತ್ಪನ್ನಗಳ ಸಂಗ್ರಹಣೆ, ಅಡಿಕೆ ಪುನರ್‌ನಾಟಿ, ಅಡಿಕೆ ಒಣಗಿಸುವ ಕಣ ಮತ್ತು ಗ್ರಾಮೀಣ ಗೃಹ ನಿರ್ಮಾಣ, ಕೃಷಿಯೇತರ ಸಾಲ ಯೋಜನೆಗಳಲ್ಲಿ ಸಾಲ ಹಾಗೂ ಚಿನ್ನಾಭರಣ ಈಡಿನ ಮೇಲೆ ಸಾಲ, ಜೊತೆಗೆ ಇತರ ಎಲ್ಲಾ ಯೋಜನೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಮುಖಾಂತರ ಸದಸ್ಯರ ಕೃಷಿ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ ಎಂದರು.
ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಲ್ಲಿ ಪಿಕಾರ್ಡ್ ಬ್ಯಾಂಕುಗಳನ್ನು ಪರಿಗಣಿಸಬೇಕಾಗಿ ಸರಕಾರಕ್ಕೆ ಮನವಿ ಕೊಡುವುದೆಂದು ಮಹಾಸಭೆಯಲ್ಲಿ ನಿರ್ಣಯಿಸಲಾಗಿರುವುದಾಗಿ ಅವರು ತಿಳಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ, ನಿರ್ದೇಶಕ ಮಂಡಳಿ ಸದಸ್ಯರಾದ ಚಂದ್ರಹಾಸ ಕರ್ಕೇರ, ರಾಜೇಶ್ ಬಾಳೆಕಲ್ಲು, ಪರಮೇಶ್ವರ ಮೂಲ್ಯ, ಹೊನ್ನಪ್ಪ ನಾಯ್ಕ್, ಮುರಳೀಧರ ಶೆಟ್ಟಿ, ಶಿವಪ್ಪ ಪೂಜಾರಿ, ವ್ಯವಸ್ಥಾಪಕರಾದ ಎಂ ಶೇಖರ, ಜಿಲ್ಲಾ ವ್ಯವಸ್ಥಾಪಕರಾದ ಸುರೇಶ್ ಬಿ.ಜೆ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಪಿಎಲ್‌ಡಿ ಬ್ಯಾಂಕ್ ಶೇ.84.62 ಸಾಲ ವಸೂಲಿ ಸಾಧನೆ: ಸುದರ್ಶನ ಜೈನ್"