ಬಂಟ್ವಾಳನ್ಯೂಸ್ ವರದಿ
ಬಂಟ್ವಾಳ ತಾಲೂಕಿನ ಹಿರಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಹಕಾರಿ ರಂಗದ ಧುರೀಣ, ಹೋರಾಟಗಾರ ಸರಪಾಡಿ ಸುಬ್ಬಣ್ಣ ಶೆಟ್ಟಿ (74)ಅವರು ಮಂಗಳವಾರ ಅನಾರೋಗ್ಯದಿಂದ ಸರಪಾಡಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸರಪಾಡಿ ಗ್ರಾಮ ಪಂಚಾಯತ್ನ ಸದಸ್ಯನಾಗಿ, ಬಂಟ್ವಾಳ ತಾಲೂಕು ಪಂಚಾಯತ್ನ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದ ಅವರು ಬಂಟ್ವಾಳ ಕ್ಷೇತ್ರ ಬಿಜೆಪಿಯ ಮುಖಂಡ ರಾಗಿದ್ದರು. ಆರಂಭಿಕ ದಿನಗಳಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಅವರು ಬಳಿಕ ಜೆಡಿಎಸ್ ಪಕ್ಷವನ್ನು ಸೇರಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಜೆಡಿಎಸ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು 2004ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.
ಪ್ರಸ್ತುತ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು, ಈ ದೇವಸ್ಥಾನವು ಸಾರ್ವಜನಿಕ ದೇವಸ್ಥಾನವಾಗಿ ಪರಿಗಣಿಸುವಲ್ಲಿ ಸುಬ್ಬಣ್ಣ ಶೆಟ್ಟಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ, ಶ್ರೀ ಶಾರದೋತ್ಸವವನ್ನು ಆಯೋಜಿಸುತ್ತಾ ಬಂದಿದ್ದ ಸುಬ್ಬಣ್ಣ ಶೆಟ್ಟಿ ಅವರು ಶ್ರೀಶರಭೇಶ್ವರ ಯಕ್ಷಗಾನ ಸಂಘವನ್ನು ಸ್ಥಾಪಿಸಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರ ಮೂಲಕ ತಾಳಮದ್ದಳೆಯನ್ನು ಸಂಘಟಿಸುತ್ತಿದ್ದರಲ್ಲದೆ ಸ್ವತ: ಅರ್ಥಧಾರಿಯಾಗಿ ತನ್ನನ್ನು ತೊಡಗಿಸಿಕೊಂಡಿದ್ದರು. ಸರಪಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ, ಮಣಿನಾಲ್ಕೂರು ಸೇವಾ ಸಹಕಾರಿ ಸಂಘದಲ್ಲಿ ದೀರ್ಘಕಾಲದಿಂದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಗತಿಪರ ಕೃಷಿಕರಾಗಿದ್ದ ಅವರು ಕಬ್ಬು ಬೆಳೆಗಾರರಾಗಿದ್ದು ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಆಯೋಜಿಸಿದ್ದ ಕಬ್ಬು ಬೆಳೆಯುವ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ಸರಪಾಡಿ ಅಣೆಕಟ್ಟು ಸಂತ್ರಸ್ತರ ಹೋರಾಟ ಸಮಿತಿಯ ಮೂಲಕ ಪ್ರತಿಭಟನೆ ನಡೆಸಿ ಬೃಹತ್ ಅಣೆಕಟ್ಟು ನಿರ್ಮಾಣವನ್ನು ತಡೆಯುವಲ್ಲಿ ಅವರು ಯಶಸ್ವಿಯಾಗಿದ್ದರು. ನೇತ್ರಾವತಿ ನದಿ ನೀರು ಮತ್ತು ವಿದ್ಯುತ್ ಬಳಕೆದಾರರರ ಸಂಘದ ಅಧ್ಯಕ್ಷರಾಗಿ ನದಿ ತೀರದ ರೈತರ ಪಂಪ್ ಸೆಟ್ಗಳನ್ನು ತೆರವುಗೊಳಿಸಿದ ಮತ್ತು ಅನಿಯಮಿತ ವಿದ್ಯುತ್ ಕಡಿತದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಸರಪಾಡಿಗೆ ಸರಕಾರಿ ಬಸ್, ಸರಕಾರಿ ಶಾಲೆಗಳು ಸಹಿತ ಮೂಲಭೂತ ಸೌಲಭ್ಯಗಳು ಬರುವಲ್ಲಿ ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರು ಹೋರಾಟದ ಮುಂಚೂಣಿಯಲ್ಲಿದ್ದರು.ಸರಪಾಡಿ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದು ಕ್ರೀಡಾಕೂಟ, ವೈದ್ಯಕೀಯ ಶಿಬಿರ ಸಹಿತ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ಅಂತಿಮ ದರ್ಶನ: ಸುಬ್ಬಣ್ಣ ಶೆಟ್ಟಿ ಅವರ ನಿಧನದ ಹಿನ್ನೆಯಲ್ಲಿ ಗ್ರಾಮಸ್ಥರು ಸಂಜೆಯವರೆಗೂ ಆಗಮಿಸಿ ಮೃತರ ಅಂತಿಮ ದರ್ಶನ ಪಡೆದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ನಾಗರಾಜ ಶೆಟ್ಟಿ, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಜಿ.ಪಂ. ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವುದಾಸ ಶೆಟ್ಟಿ, ಸರಪಾಡಿ ಗ್ರಾ. ಪಂ. ಅಧ್ಯಕ್ಷೆ ಲೀಲಾವತಿ ಮತ್ತಿತರ ಪ್ರಮುಖರು ಅಂತಿಮ ದರ್ಶನ ಪಡೆದರು.
Be the first to comment on "ಹಿರಿಯ ಸಹಕಾರಿ, ಹೋರಾಟಗಾರ, ಸಾಮಾಜಿಕ ಧುರೀಣ ಸರಪಾಡಿ ಸುಬ್ಬಣ್ಣ ಶೆಟ್ಟಿ ಇನ್ನಿಲ್ಲ"