www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಿ.ಸಿ.ರೋಡಿನಲ್ಲಿ ಇದು ಭಾನುವಾರದ ಸ್ಪೆಶಲ್..!! ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯಲ್ಲಿ ತರಕಾರಿ ಮೇಳ!
ಹಾಗೆಂದು ಇದನ್ನು ಯಾರೂ ಆಯೋಜಿಸಿದ್ದಲ್ಲ. ತರಕಾರಿ ಮಾರಾಟಗಾರರು ಅವರಾಗಿಯೇ ಬಂದು ಫ್ಲೈಓವರ್ ನಡಿ ತರಕಾರಿಯನ್ನು ಹರಡಿ ಮಾರಾಟವನ್ನು ಮಾಡುವ ವಿಚಾರವಿದು. ನೀವು ಕೈಚೀಲ ತರದಿದ್ದರೂ ಡೋಂಟ್ ವರಿ, ಪ್ಲಾಸ್ಟಿಕ್ ತೊಟ್ಟೆಯಲ್ಲಿ ಬೇಕಾದರೆ ತುಂಬಿಸಿಕೊಡಲು ಅವರು ರೆಡಿ!!. ಬಹುಶಃ ಪ್ಲಾಸ್ಟಿಕ್ ಮುಕ್ತ ಬಂಟ್ವಾಳದ ವಿಚಾರ ಅವರಿಗಿನ್ನೂ ಗೊತ್ತಾದಂತೆ ಕಾಣಿಸುತ್ತಿಲ್ಲ.
ಘಟ್ಟದ ತರಕಾರಿಗಳು, ಸ್ಥಳೀಯ ತರಕಾರಿಗಳು ಎಂಬ ವರ್ಗೀಕರಣ ಇಲ್ಲದೆ, ಸೊಪ್ಪು, ತರಕಾರಿಗಳ ಸಂತೆಯೇ ಇಲ್ಲಿದ್ದ ಕಾರಣ ಕಾರು, ಸ್ಕೂಟರುಗಳನ್ನು ರಸ್ತೆಯಲ್ಲೇ ಪಾರ್ಕ್ ಮಾಡಿದ ನಾಗರಿಕರು, ತರಕಾರಿಗಳನ್ನು ಕೊಳ್ಳಲು ಮುಗಿಬಿದ್ದರು. ದಿನವಿಡೀ ಈ ಮಾರಾಟ ಕಂಡುಬಂದಿದ್ದು, ಮಿನಿ ವಿಧಾನಸೌಧದ ಎದುರಿನ ಕಟ್ಟೆಯಲ್ಲೂ ತರಕಾರಿ ಪೇರಿಸಿ ಮಾರುತ್ತಿದ್ದರು. ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಎದುರು ಭಾನುವಾರವಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಕಿಷ್ಕಿಂಧೆಯಂಥ ವಾಹನ ದಟ್ಟಣೆಯ ನಡುವೆ ತರಕಾರಿ, ದಾಳಿಂಬೆ ಹಣ್ಣು ಮಾರಾಟವೂ ನಡೆಯುತ್ತಿದ್ದು, ಗ್ರಾಹಕರಿಗೆ ನಡೆಯುತ್ತಿರುವ ಜಾಗದಲ್ಲೇ ತರಕಾರಿಗಳು ದೊರಕುತ್ತಿವೆ. ಬೀದಿ ಬದಿ ವ್ಯಾಪಾರಕ್ಕೆ ಇನ್ನೂ ಸಮರ್ಪಕವಾದ ಜಾಗ ದೊರಕದ ಕಾರಣ ಎಲ್ಲಿ ಜಾಗವಿದೆಯೋ ಅಲ್ಲೇ ಮಾರಾಟ ಎಂಬ ತತ್ವದಂತೆ ಬಿ.ಸಿ.ರೋಡಿನಲ್ಲಿ ತರಕಾರಿ ಮಾರಾಟ ನಡೆಯುತ್ತಿದ್ದು, ಗ್ರಾಹಕರಂತೂ ಫುಲ್ ಖುಷ್ ಆಗಿದ್ದಾರೆ.
ಆದರೆ ಒಂದೆಡೆ ಪುರಸಭೆ ಪ್ಲಾಸ್ಟಿಕ್ ನಿಷೇಧ ಕುರಿತು ಕಟ್ಟಾಜ್ಞೆ ವಿಧಿಸುತ್ತಿದ್ದರೆ, ಮತ್ತೊಂದೆಡೆ ಪ್ಲಾಸ್ಟಿಕ್ ಹಿಡಿದುಕೊಂಡೇ ತರಕಾರಿ ಮಾರುವ ಪ್ರವೃತ್ತಿ ಹಾಗೆಯೇ ಉಳಿದಿದೆ. ಅದೇ ವೇಳೆ ಗ್ರಾಹಕರೂ ಕೈಚೀಲ ತರಲು ಮರೆತು, ಪ್ಲಾಸ್ಟಿಕ್ ಕೊಡಪ್ಪಾ ಎಂದು ಮಾರಾಟಗಾರನ ಬಳಿ ಕೇಳುವುದು ಕಂಡುಬಂತು.
Be the first to comment on "ಬಿ.ಸಿ.ರೋಡ್ ಫ್ಲೈ ಓವರ್ ಅಡಿಯಲ್ಲಿ ರಾಶಿ ರಾಶಿ ಟೊಮೆಟೊ, ಕ್ಯಾರಟ್, ಸೊಪ್ಪು, ತರಕಾರಿ"