ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳರ ವದಂತಿ ಹಾಗೂ ಥಳಿತ ಪ್ರಕರಣಗಳು ವಿಪರೀತಕ್ಕೆ ಹೋಗುತ್ತಿದೆ. ಯಾವುದೋ ಊರಿಂದ ಬದುಕು ಕಟ್ಟಿಕೊಳ್ಳಲು ಬಂದ ಮುಗ್ಧರು ಕೆಲವೆಡೆ ಈ ವದಂತಿ ತುತ್ತಾಗಿದ್ದರೆ, ಇಂಜಿನಿಯರ್‌ಗಳೂ ಬಲಿಯಾಗಿದ್ದೂ ಇದೆ. ಇದೀಗ ಪೊಲೀಸರೇ ಈ ವದಂತಿಗೆ ತುತ್ತಾಗಿದ್ದಾರೆ.
ಕಳ್ಳನ ಹಿಡಿಯಲು ಮಫ್ತಿಯಲ್ಲಿ ಬಂದಿದ್ದ ಇಬ್ಬರು ಪೊಲೀಸರನ್ನೇ ಮಕ್ಕಳ ಕಳ್ಳ ರೆಂದು ಭಾವಿಸಿ ಸ್ಥಳೀಯರು ಥಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಪೊಲೀಸರು ಗ್ರಾಮಕ್ಕೆ ಬರುತ್ತಿರುವುದನ್ನು ಅರಿತ ಕಳ್ಳ ತನ್ನ ಸ್ನೇಹಿತರ ನೆರವಿನಿಂದ ಊರಲ್ಲಿಡೀ ಮಕ್ಕಳ ಕಳ್ಳರ ವದಂತಿ ಹಬ್ಬಿಸಿದ. ಸಾಮಾನ್ಯ ದಿರಿಸಿನಲ್ಲಿದ್ದ ಪೊಲೀಸರನ್ನು ತೋರಿಸಿದ. ಈತನ ಮಾತು ನಂಬಿದ ಗ್ರಾಮಸ್ಥರು ಪೊಲೀಸರಿಗೆ ಮನಬಂದಂತೆ ಥಳಿಸತೊಡಗಿದರು. ಜನರು ಪೊಲೀಸರಿಗೆ ಹೊಡೆಯುವ ವೇಳೆ ಆ ಕಳ್ಳ ಸ್ಥಳದಿಂದ ಪರಾರಿಯಾಗಿದ್ದ. ಕೊನೆಗೆ ಪೊಲೀಸ್ ವ್ಯಾನ್ ಬಂದು ಉದ್ರಿಕ್ತ ಜನರನ್ನು ನಿಯಂತ್ರಿಸಬೇಕಾಯಿತು. ಅದೃಷ್ಟವಶಾತ್ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಿಸಲಾಗಿದೆ. ಕಳ್ಳನಿಗೆ ವದಂತಿ ಹಬ್ಬಿಸಲು ನೆರವಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Be the first to comment on "ಕಳ್ಳನ ಬಿಟ್ಟರು, ಪೊಲೀಸರ ಥಳಿಸಿದರು!"