ತ್ರೀಡಿ ತಾರಾಲಯದ ವೀಕ್ಷಣೆಯ ಕಾರ್ಯಕ್ರಮಕ್ಕೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಂದ ಅದ್ಭುತ ಸ್ಪಂದನೆ ದೊರೆತಿದೆ ಎಂದು ಬೆಂಗಳೂರು ಆರ್ಯಭಟ ತಾರಾಲಯದ ಯೋಜನಾ ವ್ಯವಸ್ಥಾಪಕ ಲಕ್ಷ್ಮೀಪತಿ ಹೇಳಿದರು.
ಬಂಟ್ವಾಳ ರೋಟರೀ ಕ್ಲಬ್ ನ ಸುವರ್ಣ ವರ್ಷಾಚರಣೆಯ ಅಂಗವಾಗಿ ಮಾಣಿಯ ಕರ್ನಾಟಕ ಪ್ರೌಢಶಾಲೆಯಲ್ಲಿ, ರೋಟರಿ ಕ್ಲಬ್ ಹಾಗೂ ಕರ್ನಾಟಕ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾದ “ಶಾಲಾ ಅಂಗಳದಲ್ಲಿ ತಾರಾಲಯ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಹೊರಜಿಲ್ಲೆಯಲ್ಲಿ ನಡೆಯುತ್ತಿದ್ದು, ಇದಕ್ಕೆ ಬಂಟ್ವಾಳ ರೋಟರೀ ಕ್ಲಬ್ ಕಾರಣ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಂಟ್ವಾಳ ರೋಟರೀ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಮಾತನಾಡಿ, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುವ ನಿಟ್ಟನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನಮ್ಮ ರೋಟರೀ ಕ್ಲಬ್ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದೆ, ಗ್ರಾಮೀಣ ವಿದ್ಯಾರ್ಥಿಗಳ ನ್ನು ದೃಷ್ಟಿಯಲ್ಲಿರಿಸಿಕೊಂಡು ಶಾಲೆಯಂಗಳದಲ್ಲಿ ತಾರಾಲಯ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಮಾಣಿ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಸಂಬಂಧಿ ವಿಚಾರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಆಸಕ್ತಿ ತೋರಬೇಕು, ತಾರಾಲಯ ವೀಕ್ಷಣೆ ಇದಕ್ಕೆ ಪೂರಕವಾಗಿದೆ ಎಂದರು.
ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಆಳ್ವ ಕೊಡಾಜೆ , ಸನತ್ ಕುಮಾರ್ ಜೈನ್, ರೋ.ಪದ್ಮಲತಾ ಪುಷ್ಪರಾಜ್ ಹೆಗ್ಡೆ , ಪತ್ರಕರ್ತ ಮೌನೇಶ ವಿಶ್ವಕರ್ಮ, ವಿಜ್ಞಾನ ಸಂಘದ ಅಧ್ಯಕ್ಷೆ ಭಾರ್ಗವಿ, ತಾರಾಲಯದ ವ್ಯವಸ್ಥಾಪಕ ಸತೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಡಿ.ಕೆ.ಭಂಡಾರಿ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಚೆನ್ನಪ್ಪ ಗೌಡ ವಂದಿಸಿದರು. ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ತ್ರಿಡಿ ತಾರಾಲಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸ್ಪಂದನೆ"