ಕತ್ತಲಿನಿಂದ ಬೆಳಕನ್ನು ಒದಗಿಸುವ ನಾಯಕ. ಜಗತ್ತಿನ ಒಡೆಯ ಗಣಪತಿಯ ಪೂಜೆ ನಿತ್ಯನಿರಂತರ ಎಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.
ಬಂಟ್ವಾಳ ಜಕ್ರಿಬೆಟ್ಟುವಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 15ನೇ ವರ್ಷಾಚರಣೆಯ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಆಧ್ಯಾತ್ಮಿಕ ಹಿನ್ನೆಲೆಯಲ್ಲೂ ಗಣಪತಿಯ ಅರಿವು ನಮಗೆ ಇಂದು ಅಗತ್ಯವಾಗಿದೆ ಎಂದು ಹೇಳಿದ ಅವರು, ನಮ್ಮೊಳಗಿರುವ ತಾಮಸೀ ಶಕ್ತಿಯನ್ನು ಹೊಡೆದು ಹಾಕಿ, ದೈವೀ ಶಕ್ತಿಯನ್ನು ಜಾಗೃತಗೊಳಿಸುವ ವಿನಾಯಕ ಸರ್ವವಂದ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ಜಾತಿ, ಮತಗಳನ್ನು ಮೀರಿ ಸಾಮರಸ್ಯದ ತಳಹದಿಯಲ್ಲಿ ಬದುಕು ಸಾಗಿಸುವ ಸನ್ನಿವೇಶದಲ್ಲಿ ಗಣೇಶೋತ್ಸವಗಳು ಸಹಕಾರಿಯಾಗುತ್ತದೆ ಎಂದರು.
ಶೃಂಗೇರಿ ಶಾಸಕ ರಾಜೇಗೌಡ, ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಳೀ ಮೋಹನ ಚೂಂತಾರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿದರು. ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕ ಮಾತನಾಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸಮಿತಿಯ ಪದಾಧಿಕಾರಿಗಳಾದ ಜನಾರ್ದನ ಚಂಡ್ತಿಮಾರ್, ಮಾಯಿಲಪ್ಪ ಸಾಲಿಯಾನ್, ಪ್ರವೀಣ್ ಕಿಣಿ, ಬೇಬಿ ಕುಂದರ್, ವಾಸು ಪೂಜಾರಿ, ಪುರಸಭೆ ಸದಸ್ಯ ಗಂಗಾಧರ್, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಶರೀಫ್ ಮೊದಲಾದವರು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ರಾಜೀವ ಕಕ್ಯಪದವು ಮತ್ತು ಎಡ್ತೂರು ರಾಜೀವ ಶೆಟ್ಟಿ ನಿರೂಪಿಸಿದರು.
Be the first to comment on "ಜಗತ್ತಿನ ಒಡೆಯ ಗಣಪತಿಯ ಪೂಜೆ ನಿತ್ಯನಿರಂತರ: ಒಡಿಯೂರು ಶ್ರೀಗಳು"