ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು. ಬಡ ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಮಾದರಿಯಾದ ಕೆಲಸ ಎಂದು ಬಂಟ್ವಾಳ ನಗರ ಆರಕ್ಷಕ ಠಾಣೆ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹೇಳಿದರು.
ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಫ್ರೀ ಮಿಡ್-ಡೇ ಮಿಲ್ ಸ್ಕೀಮ್ ೨೦೧೮ನ್ನು ಉದ್ಘಾಟಿಸಿ ಮಾತನಾಡಿದರು.
ಬಂಟ್ವಾಳ ಎಸ್.ವಿ.ಎಸ್ ಕಾಲೇಜು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರೊನಾಲ್ಡ್ ಡಿಸೋಜ ಮಾತನಾಡಿ, ಜ್ಞಾನದ ಹಸಿವನ್ನು ನೀಗಿಸುವ ಜತಜತೆಯಲ್ಲಿ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಂಡು ಹೊಟ್ಟೆಯ ಹಸಿವನ್ನು ನೀಗಿಸುವ ಕೆಲಸ ಅಭಿನಂದನೀಯ. ಇಂತಹ ಒಳ್ಳೆಯ ಕೈಂಕರ್ಯಕ್ಕೆ ಹೆಚ್ಚು ದಾನಿಗಳ ನೆರವು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ಎಸ್.ವಿ.ಎಸ್ ಕಾಲೇಜು ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಲಕ್ಷ್ಯದಲ್ಲಿಸಿಕೊಂಡು ಈ ಯೋಜನೆ ಪ್ರಾರಂಭಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹದೊಂದಿಗೆ ಮಧ್ಯಾಹ್ನದ ಉಚಿತ ಭೋಜನದ ಯೋಜನೆಯು ಕಾರ್‍ಯನಿರ್ವಹಿಸುತ್ತಿದೆ. ನೂರಾರು ಮಂದಿ ವಿದ್ಯಾರ್ಥಿಗಳು ಈ ಯೋಜನೆಯ ಲಾಭಪಡೆದು ಮುಂದೆ ಉನ್ನತ ವ್ಯಾಸಂಗವನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಕಾಲೇಜಿನಿಂದ ದೊರೆಯುವ ಸೌಲಭ್ಯವನ್ನು ಸಮರ್ಥವಾಗಿ ಬಳಸುವುದು ಮುಖ್ಯ ಎಂದರು.
ಎಸ್.ವಿ.ಎಸ್ ಕಾಲೇಜು ಉಪಪ್ರಾಂಶುಪಾಲೆ ಡಾ. ಸುಜಾತ ಎಚ್.ಆರ್. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ನಾರಾಯಣ ಭಂಡಾರಿ ವಂದಿಸಿ, ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಕಾರ್‍ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು.
Be the first to comment on "ಬಂಟ್ವಾಳ ಎಸ್.ವಿ.ಎಸ್. ಕಾಲೇಜಲ್ಲಿ ಉಚಿತ ಮಧ್ಯಾಹ್ನದ ಊಟ"