- ದೇಶದ ಶಿಕ್ಷಣ ನೀತಿ ಬದಲಾವಣೆ ಮಾಡಿ ಭವ್ಯ ಭಾರತದ ಇತಿಹಾಸಗಳನ್ನು ಶಾಲಾ
ಪಠ್ಯದಲ್ಲಿ ಸೇರ್ಪಡೆ ಮಾಡಬೇಕು. ಈ ವಿಚಾರದಲ್ಲಿ ಕೇಂದ್ರ, ರಾಜ್ಯ ಸರಕಾರ ಸಂತರನ್ನು
ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. - ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪಕ್ಷ ಬೇಧವನ್ನು ಮರೆತು ಮುಂದಿನ 10ವರ್ಷದಲ್ಲಿ
ಪ್ರತಿ ಹಳ್ಳಿಗಳಲ್ಲಿ ಗುರುಕುಲ ಮಾದರಿಯ ಅಂಗನವಾಡಿ ವಿದ್ಯಾಸಂಸ್ಥೆ ಪ್ರಾರಂಭಿಸಬೇಕು. - ಸಂತರು, ತೀರ್ಥಕ್ಷೇತ್ರ ತಿರುಗಾಡುವ ಸಂತರು, ವಯೋವೃದ್ಧ ಸಂತರ ಜೀವನಕ್ಕೆ ಭದ್ರತೆ
ಇಲ್ಲವಾಗಿದ್ದು, ಕೇಂದ್ರ-ರಾಜ್ಯ ಸರಕಾರ ‘ಸಂತರ ಕಲ್ಯಾಣ ನಿಧಿ’ ಸ್ಥಾಪಿಸಬೇಕು. - ನಿತ್ಯ ಜೀವನಕ್ಕೆ ಅನುಕೂಲವಾಗುವ ಸಂವಿಧಾನಾತ್ಮಕ ಕಾನೂನುಗಳನ್ನು
ಪಠ್ಯಪುಸ್ತಕದಲ್ಲಿ ಬೋಧಿಸುವುದು. - ಸನಾತನ ಧರ್ಮದ ಪರಮವಾಕ್ಯ “ವಸುದೈವ ಕುಟುಂಬಕಮ್’ ಮಾದರಿಯಲ್ಲೇ ಧರ್ಮಸಂಸದ್
ನಡೆಯಬೇಕು. ಅನ್ಯಧರ್ಮಗಳ ಟೀಕೆ ಸಲ್ಲದು. - ಧರ್ಮ ಸಂಸದ್ ಉದ್ದೇಶ ಸಾಕಾರಗೊಳಿಸಲು ಸನಾತನ ಹಿಂದೂ ಧರ್ಮದ ಎಲ್ಲ ಪರಂಪರೆಗಳ
ಮುಖ್ಯಸ್ಥರನ್ನು ಒಟ್ಟು ಸೇರಿಸಿ ಲೋಕ ಕಲ್ಯಾಣ ಹಾಗೂ ಧರ್ಮರಕ್ಷಣೆಗೆ “ರಾಷ್ಟ್ರೀಯ ಲೋಕ
ಕಲ್ಯಾಣ ಮಂಚ್’ ಸಂಸ್ಥೆ ಸ್ಥಾಪಿಸುವ ಉದ್ದೇಶ.
ಇವೇ ಪ್ರಮುಖ ನಿರ್ಣಯಗಳೊಂದಿಗೆ ಧರ್ಮಸ್ಥಳ ಕನ್ಯಾಡಿ ನಿತ್ಯಾನಂದನಗರದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಮತ್ತು ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮಕ್ಕೆ ಸೋಮವಾರ ರಾತ್ರಿ ಸಂಭ್ರಮದ ತೆರೆ.
ಧಾರ್ಮಿಕ ಜಾಗೃತಿ ಮೂಡಿಸುವುದರೊಂದಿಗೆ ಭಕ್ತ-ಸಂತರ ಸಂಗಮ ಈ ಕಾರ್ಯಕ್ರಮದಿಂದ ನಡೆಯಿತು.
ಸೆ.2ರಂದು ಸಂಜೆ 6ಕ್ಕೆ ಉಜಿರೆ ಜನಾರ್ಧನ ದೇವಸ್ಥಾನದಿಂದ ನಾನಾ ಪರಂಪರೆಯ ಜಗದ್ಗುರುಗಳು, ಮಹಾಮಂಡಲೇಶ್ವರರು, ನಾಗಾಸಾಧುಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕನ್ಯಾಡಿ ಶ್ರೀರಾಮಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. 8 ಗಂಟೆಗೆ ಧರ್ಮಸಂಸದ್ ನ ನಿರ್ಣಯಗಳ ಬಗ್ಗೆ ಸಂತ ಚಿಂತನೆ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಿತು. ಸೋಮವಾರ ಬೆಳಗ್ಗೆ 7ರಿಂದ ಶ್ರೀರಾಮತಾರಕ ಮಂತ್ರಯಜ್ಞ, 9.15ಕ್ಕೆ ಸರಿಯಾಗಿ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಪಟ್ಟಾಭಿಷೇಕ ದಶಮಾನೋತ್ಸವ ಸಂಭ್ರಮಕ್ಕೆ ರಜತ ಪೀಠದಲ್ಲಿ ವಿರಾಜಮಾನರಾದರು. ಇದಾದ ಬಳಿಕ ಲಕ್ಷ್ಮೀಪತಿ ಗೋಪಾಲಾಚಾರ್ಯರ ವೈದಿಕ ನೇತೃತ್ವದಲ್ಲಿ ವೇದಘೋಷಗಳು ಮೊಳಗಿದವು. ಚೆಂಡೆ, ಬ್ಯಾಂಡ್, ವಾದ್ಯ ನಿನಾದಗಳು ಆಧ್ಯಾತ್ಮ ಲೋಕದತ್ತ ಕೊಂಡೊಯ್ಯಿತು. ಸ್ವಾಮೀಜಿಗಳಿಗೆ ತುಳಸಿಹಾರ ಹಾಕಿ, ಕಿರೀಟಧಾರಣೆ ಮಾಡಿ, ಆರತಿ ಬೆಳಗಲಾಯಿತು. ಈ ಅಪೂರ್ವ ಕ್ಷಣಕ್ಕೆ ಭಕ್ತಸಾಗರ ಸಾಕ್ಷಿಯಾಯಿತು.
ಬೆಳಗ್ಗೆ 10.30ಕ್ಕೆ ಸರಿಯಾಗಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ 108 ಸ್ವಾಮೀಜಿಗಳು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯರು ವೈಭವದ ಮೆರವಣಿಗೆಯಲ್ಲಿ ಧರ್ಮಸಂಸದ್ ನಡೆಯುವ ಆತ್ಮಾನಂದ ಸರಸ್ವತಿ ವೇದಿಕೆಗೆ ಆಗಮಿಸಿದರು. ಸುಮಾರು ಮೂರುವರೆ ಗಂಟೆಗಳಕಾಲ ನಡೆದ ಧರ್ಮ ಸಂಸದ್ ಉದ್ಘಾಟನಾ ಸಭೆಯಲ್ಲಿ ಗಣ್ಯಾತಿಗಣ್ಯರು, ಸಂತರು ಸನಾತನ ಹಿಂದೂ ಧರ್ಮದ ರಕ್ಷಣೆ,
ಶಿಕ್ಷಣ ನೀತಿ ಬದಲಾವಣೆ ಸೇರಿದಂತೆ ನಾನಾ ವಿಷಯ ಪ್ರಸ್ತಾಪ ಮಾಡಿದರು. ಮಧ್ಯಾಹ್ನ 2.30ರಿಂದ ರಾಷ್ಟ್ರೀಯ ಧರ್ಮಸಂಸದ್ ವೇದಿಕೆಯಲ್ಲಿ ಸಾಧುಸಂತರು ಆಸೀನರಾಗಿ ದಿವ್ಯಸಂದೇಶವನ್ನು ನೀಡಿದರು. ಈ ಸಂದರ್ಭ 6 ಪ್ರಮುಖ ನಿರ್ಣಯಗಳ ವಿಷಯದಲ್ಲಿ ಸಂತರು ವಿಚಾರ ಮಂಡನೆ ಮಾಡಿದರು.
25ಸಾವಿರಕ್ಕೂ ಅಧಿಕ ಮಂದಿ ಭಾಗಿ:
ಧರ್ಮಸಂಸದ್ ಕಾರ್ಯಕ್ರಮದಲ್ಲಿ ಸುಮಾರು 25ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಆತಿಥ್ಯ ಸತ್ಕಾರ ನೀಡುವಲ್ಲಿ ಸಾವಿರಾರು
ಕಾರ್ಯಕರ್ತರ ಪಡೆ ಅವಿರತ ಶ್ರಮಿಸಿತು. ಸ್ವಚ್ಛತೆ, ಪಾರ್ಕಿಂಗ್ ವ್ಯವಸ್ಥೆ, ರಾಜಬೀದಿ, ದೇವಳದ ಎಲ್ಲೆಲ್ಲೂ ಕೇಸರಿ ರಾರಾಜಿಸುತ್ತಿತ್ತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ದೇಶದ ನಾನಾ ಕಡೆಯಿಂದ ಗಣ್ಯರು, ಸಚಿವರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಉದ್ಯಮಿಗಳು, ಸಿನಿಮಾನಟರು, ವಿದ್ಯಾರ್ಥಿಗಳು ಭಾಗವಹಿಸಿದರು.
Be the first to comment on "ರಾಷ್ಟ್ರೀಯ ಧರ್ಮಸಂಸದ್ – ಸಂತ ಭಕ್ತರ ಸಂಗಮದಲ್ಲಿ ಆರು ಪ್ರಮುಖ ನಿರ್ಣಯ"