- ಬಂಟ್ವಾಳ ಪುರಸಭೆ ಚುನಾವಣೆಗೆ ಸಕಲ ಸಿದ್ಧತೆ: ಮತಯಂತ್ರಗಳು ಮತಗಟ್ಟೆಯಲ್ಲಿ
ಪುರಸಭೆ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಆಗಸ್ಟ್ 31ರ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಆರಂಭಗೊಳ್ಳುವ ಚುನಾವಣೆಯ ಮಸ್ಟರಿಂಗ್ ಕಾರ್ಯ ಗುರುವಾರ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂದಿಲ್ ಸ್ಥಳಕ್ಕೆ ಆಗಮಿಸಿ, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ಮತ್ತು ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಂದ ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.
ಶಾಂತಿಯುತ ಮತದಾನಕ್ಕೆ ಹೆಚ್ಚಿನ ಬಂದೋಬಸ್ತ್ ಕಾರ್ಯಗಳನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳು ಇಲ್ಲ ಎಂದು ಈ ಸಂದರ್ಭ ಸುದ್ದಿಗಾರರಿಗೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದರು.
ಬಂಟ್ವಾಳ ಚುನಾವಣಾಧಿಕಾರಿಗಳಾದ ರಾಜೇಶ್,ಕೆ ಮೋಹನ್ ಕುಮಾರ್, ನೋಣಯ್ಯ ನಾಯ್ಕ್ , ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಪ್ರಭಾರ ಚುನಾವಣಾ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್, ದ್ವಿತೀಯ ದರ್ಜೆ ಸಹಾಯಕ ವಿನಯ ನಾಗರಾಜ್ , ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ,ದಿವಾಕರ ಮುಗುಳಿಯ, ನವೀನ್ ಬೆಂಜನ ಪದವು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು. ಚುನಾವಣಾ ವೀಕ್ಷಕ ಕನಕರಾಜು ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು
ಇದೇ ವೇಳೆ ಬಂಟ್ವಾಳ ಪುರಸಭೆಯ 27 ವಾರ್ಡುಗಳ 32 ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ಮತದಾನ ಪ್ರಕ್ರಿಯೆಗೆ ಬೇಕಾದ ಇವಿಎಂ ಯಂತ್ರಗಳ ಸಹಿತ ನಾನಾ ಸಿದ್ಧತೆಗಳನ್ನು ಪರಿಶೀಲಿಸಿ ತಮ್ಮ ಬೂತ್ ಗಳಿಗೆ ತೆರಳಿದರು.
ಪ್ರತಿಯೊಂದು ಮತಗಟ್ಟೆಗೆ ಒಂದು ಮತಗಟ್ಟೆ ಅದ್ಯಕ್ಷಾಧಿಕಾರಿ (ಪಿ.ಆರ್.ಒ.) ಒಂದು ಎ.ಪಿ.ಆರ್.ಒ, ಎರಡು ಪಿ.ಒ. ಒಂದು ಮಹಿಳಾ ಸಿಬ್ಬಂದಿ ಒಂದು ಗ್ರೂಪ್ ಡಿ.ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣೆಗೆ ಸಂಬಂದಿಸಿ ಮೂವರು ಚುನಾವಣಾಧಿಕಾರಿಗಳು, ಮೂವರು ಸಹಾಯಕ ಚುನಾವಣಾಧಿಕಾರಿಗಳು, ಮೂವರು ಸೆಕ್ಟರ್ ಅಧಿಕಾರಿಗಳು, ಮೂವರು ಕಂದಾಯ ನಿರೀಕ್ಷಕ ರುಗಳು, ಆರು ಮಂದಿ ಗ್ರಾಮ ಕರಣೀಕರುಗಳು, ಹಾಗೂ ಗ್ರಾಮ ಸಹಾಯಕರುಗಳು ಕಾರ್ಯನಿರ್ವಹಿಸಲಿದ್ದಾರೆ.
27 ವಾರ್ಡು, 32 ಮತಗಟ್ಟೆ:
ಬಂಟ್ವಾಳ ಪುರಸಭೆಯಲ್ಲಿ ಒಟ್ಟು 27 ವಾರ್ಡುಗಳಿದ್ದು, 32 ಮತಗಟ್ಟೆಗಳು ಇವೆ. ಅವುಗಳಲ್ಲಿ 14 ಅತಿ ಸೂಕ್ಷ್ಮ ಮತ್ತು 18 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಒಟ್ಟು 34102 ಮತದಾರರಿದ್ದು 16847 ಗಂಡಸರು ಮತ್ತು 17255 ಹೆಂಗಸರು ಮತ ಚಲಾಯಿಸಲಿದ್ದಾರೆ.
ಪೊಲೀಸ್ ಬಂದೋಬಸ್ತ್:
ಬಂಟ್ವಾಳ ಎಎಸ್ಪಿ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಆರು ಮಂದಿ ಎಸ್ಸೈಗಳು ಬಂದೋಬಸ್ತ್ ಜವಾಬ್ದಾರಿ ವಹಿಸಿದ್ದಾರೆ. 32 ಮತಗಟ್ಟೆಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಪ್ರತಿಯೊಂದಕ್ಕೂ ಒಬ್ಬ ಪಿಎಸ್ ಐ ಜವಾಬ್ದಾರಿ ವಹಿಸುತ್ತಿದ್ದಾರೆ.
3 ಕೆ.ಎಸ್.ಆರ್.ಪಿ, ಒಂದು ಡಿ.ಎ.ಅರ್. ಸ್ಟ್ರೈ ಕಿಂಗ್ ಫೋರ್ಸ್ ಹೆಚ್ಚುವರಿಯಾಗಿ ಬಂದಿವೆ. ಅವಲ್ಲದೆ ಅಡ್ಡಮತದಾನ ಸಂದೇಹವಿರುವ ಬೂತ್ ಗಳಲ್ಲೂ ತೀವ್ರ ನಿಗಾ ವಹಿಸಲಾಗುತ್ತಿದೆ.
Be the first to comment on "ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್"