- ಬಂಟ್ವಾಳ ಪುರಸಭೆ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿ ರಮಾನಾಥ ರೈ ಆಶ್ವಾಸನೆ
ಫಲಿತಾಂಶ ಹೇಗೆಯೇ ಬಂದರೂ ಮತೀಯವಾದಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡುವುದಿಲ್ಲ. ಕಾರ್ಯಗತಗೊಳ್ಳುವ ವಿಶ್ವಾಸವಿರುವ ವಿಚಾರಗಳನ್ನು ಮಾತ್ರ ಪ್ರಣಾಳಿಕೆಯಲ್ಲಿ ಅಳವಡಿಸಿದ್ದೇವೆ. ಬಂಟ್ವಾಳ ಪುರಸಭೆಯ ನಿವೇಶನರಹಿತರಿಗೆ ನಿವೇಶನ, ವಸತಿರಹಿತರಿಗೆ ಫ್ಲ್ಯಾಟ್ ಮಾದರಿ ವಸತಿ ಸಂಕೀರ್ಣ ನಿರ್ಮಾಣ, ಮನೆ ಮತ್ತು ಅಂಗಡಿಗಳಿಗೆ ತೆರಿಗೆ ವಿನಾಯತಿ ಸೇರಿದಂತೆ ಬದ್ಧತೆಗಳನ್ನು ಒದಗಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬಂಟ್ವಾಳ ಪುರಸಭೆ ಹಿನ್ನೆಲೆಯಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಂಟ್ವಾಳ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಹತ್ತಿರದ ಗ್ರಾಪಂಗಳನ್ನು ಸೇರ್ಪಡೆಗೊಳಿಸಬೇಕಾಗಿತ್ತು. ಆದರೆ ಬಿಜೆಪಿ ಆಡಳಿತವಿರುವ ಗ್ರಾಪಂಗಳು ಅನುಮತಿ ನೀಡಲು ನಿರಾಕರಿಸಿದವು. ನಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ದೊಡ್ಡ ಆಶ್ವಾಸನೆಗಳನ್ನು ಕೊಟ್ಟಿಲ್ಲ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ನಾವೇ ಶಂಕುಸ್ಥಾಪನೆ ಮಾಡಿದ್ದೇವೆ. ಮೇಲ್ಕಾರ್ ಜಂಕ್ಷನ್ ಅಭಿವೃದ್ಧಿ, ನಗರೋತ್ಥಾನಕ್ಕೆ ಹೆಚ್ಚುವರಿ ಅನುದಾನ, ಒಳಚರಂಡಿ ಯೋಜನೆಗೆ ಮಂಜೂರಾತಿ ನಮ್ಮ ಕಾಲದಲ್ಲೇ ಆಗಿವೆ ಎಂದು ರೈ ಹೇಳಿದರು.
ಪ್ರಣಾಳಿಕೆಯಲ್ಲೇನಿದೆ:
ಘನ ಮತ್ತು ದ್ರವತ್ಯಾಜ್ಯ ವಿಲೇವಾರಿಗೆ ಜರ್ಮನ್ ಮಾದರಿ ಪೈರೋಲಿಸಿಸ್ ತಂತ್ರಜ್ಞಾನ ಅಳವಡಿಕೆ, ಬಂಟ್ವಾಳ ಪುರಸಭೆಗೆ ಒಳಾಂಗಣ ಕ್ರೀಡಾಂಗಣ ಮತ್ತು ಹೈಟೆಕ್ ಈಜುಕೊಳ, ವಸತಿ ರಹಿತರಿಗೆ ಫ್ಲ್ಯಾಟ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ, ನಿವೇಶನರಹಿತರಿಗೆ ನಿವೇಶನ, ಪುರಸಭೆ ವ್ಯಾಪ್ತಿಯಲ್ಲಿ ಉದ್ಯೋಗ ಮೇಳ ಆಯೋಜನೆ, ಈಗಾಗಲೇ ಮಂಜೂರಾದ ಒಳಚರಂಡಿ ಯೋಜನೆ ಶೀಘ್ರ ಅನುಷ್ಠಾನ, ಪುರಸಭೆ ವ್ಯಾಪ್ತಿಯಲ್ಲಿ ಉಚಿತ ವೈಫೈ, ಆಟೋ ಚಾಲಕರಿಗೆ ನಾಲ್ಕು ಕಡೆ ಪಾರ್ಕಿಂಗ್, ಪುರಸಭೆ ವತಿಯಿಂದ ಆಂಬುಲೆನ್ಸ್, ಸ್ವಸಹಾಯ ಸಂಘ ಸದಸ್ಯರ ತಯಾರಿಗಳಿಗೆ ವಿಶೇಷ ಮಾರುಕಟ್ಟೆ, ಅಸಂಘಟಿತ ವಲಯ ಕಾರ್ಮಿಕರಿಗೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಮನೆ, ಅಂಗಡಿಗಳಿಗೆ ತೆರಿಗೆ ರಿಯಾಯತಿ, ವಾಕಿಂಗ್ ಟ್ರ್ಯಾಕ್, ಹುತಾತ್ಮ ಸೈನಿಕರಿಗೆಸ್ಮಾರಕ ನಿರ್ಮಾಣ ಪ್ರಣಾಳಿಕೆಯಲ್ಲಿ ಸೇರಿದೆ.
ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ.ಪದ್ಮಶೇಖರ ಜೈನ್, ಮಮತಾ ಡಿ.ಎಸ್. ಗಟ್ಟಿ, ಮಂಜುಳಾ ಮಾಧವ ಮಾವೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಆಲಿ, ಪುರಸಭೆಯ ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಗೇರು ನಿಗಮ ಮಾಜಿ ಅಧ್ಯಕ್ಷ ಬಿ.ಎಚ್. ಖಾದರ್, ಡಿಸಿಸಿ ಉಪಾಧ್ಯಕ್ಷ ಬೇಬಿ ಕುಂದರ್, ತಾಪಂ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಪಕ್ಷ ಪ್ರಮುಖರಾದ ಮಾಧವ ಮಾವೆ, ಬಾಲಕೃಷ್ಣ ಆಳ್ವ, ಕುಶಾಲ ಎಂ, ಜಗದೀಶ ಕೊಯ್ಲ, ಲೋಕೇಶ್ ಪೂಜಾರಿ, ಶಕೀರ್ ಬಂಟ್ವಾಳ, ಲೋಲಾಕ್ಷ ಶೆಟ್ಟಿ, ಮಹೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆರಿಗೆ ರಿಯಾಯಿತಿ, ವಸತಿ ಸಂಕೀರ್ಣ ನಿರ್ಮಾಣ"