ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆ ಬುಧವಾರ ಸಂಜೆ ತೀವ್ರಗೊಂಡಿದ್ದು, ಬಿ.ಸಿ.ರೋಡಿನ ಗಾಣದಪಡ್ಪವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಮಂದಿರದ ಅವರಣಗೋಡೆ ಬುಧವಾರ ಕುಸಿಯಿತು. ಇದರಿಂದ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದ್ದು, ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ದಿಂದಲೇ ಸಣ್ಣ ನೀರಾವರಿ ಇಲಾಖಾ ಇಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು,ಅವರಣಗೋಡೆಗೆ ತಕ್ಷಣ ಅಂದಾಜುಪಟ್ಟಿ ತಯಾರಿಸುವಂತೆ ಸೂಚಿಸಿದರು.
ಇದಕ್ಕೆ ಸ್ಪಂದಿಸಿದ ಇಂಜಿನಿಯರ್ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಮುಂದಿನಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕರಿಗೆ ನೀಡಿದ್ದಾರೆ. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ,ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ರವರು ಈ ಬಗ್ಗೆ ಶಾಸಕರಿಗೆ ಪೂರಕ ಮಾಹಿತಿ ನೀಡಿದರು.
ಈ ಸಂದರ್ಭ ಸಂಘದ ಪದಾಧಿಕಾರಿಗಳಾದ ಸಂಜೀವ ಪೂಜಾರಿ ಗಾಣದಪಡ್ಪು,ವಿಶ್ವನಾಥ ಬಿ.ಸಿ.ರೋಡ್, ತಾಪಂ ಸದಸ್ಯ ಗಣೇಶ್ ಸುವರ್ಣ,ಪ್ರಮೋದ್ ಕುಮಾರ್ ಅಜ್ಜಿಬೆಟ್ಟು,ನಾರಾಯಣ ಪೂಜಾರಿ ಮೊದಲಾದವರಿದ್ದರು. 2003 ರಲ್ಲಿ ಜನಾರ್ಧನ ಪೂಜಾರಿಯವರು ಸಂಸದರಾಗಿದ್ದ ಕಾಲದಲ್ಲಿ ಸಂಸದರ ನಿಧಿಯಿಂದ ಸುಮಾರು 10ಲಕ್ಷ ರೂ.ವೆಚ್ಚದಲ್ಲಿ ಅವರ ವಿಶೇಷ ಮುತುವರ್ಜಿಯಿಂದ ಈ ಅವರಣಗೋಡೆ ನಿರ್ಮಿಸಲಾಗಿತ್ತು.
Be the first to comment on "ಸಂಜೆಯಾದ ಬಳಿಕ ತೀವ್ರಗೊಂಡ ಮಳೆ, ಆವರಣ ಗೋಡೆ ಕುಸಿತ"