ಇಂದು ಶೇ.೮೦ರಷ್ಟು ಗ್ರಾಮೀಣ ಪ್ರತಿಭೆಗಳೇ ಎಲ್ಲಾ ವಿಷಯದಲ್ಲೂ ಮುಂದಿದ್ದಾರೆ. ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ವೀರಕಂಭದ ದ.ಕ.ಜಿ.ಪಂ.ಹಿ.ಪ್ರಾ,ಶಾಲೆಯಲ್ಲಿ ನಾನಾ ಕೊಡುಗೆಗಳ ಉದ್ಘಾಟನೆ ಹಾಗೂ ವಿವಿಧ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳು ದೇಗುಲಕ್ಕೆ ಸಮನಾದುದು. ಅವುಗಳ ಅಭಿವೃದ್ಧಿಯಿಂದ ಊರಿನ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ ಅವರು, ಈ ಕಾರ್ಯಕ್ಕಾಗಿ ಜಾತಿ ಬೇಧವಿಲ್ಲದೇ ಊರಿನ ವಿದ್ಯಾಭಿಮಾನಿಗಳು, ಸಂಘ ಸಂಸ್ಥೆಗಳು, ಪೋಷಕರು ಇಲಾಖೆಯೊಂದಿಗೆ ಸ್ಪಂದಿಸಿ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು ಎಂದರು.
ಶಾಲಾ ಹಿರಿಯ ವಿದ್ಯಾರ್ಥಿ ಶ್ರೀಮಾತಾ ಡೆವಲಾಪರ್‍ಸ್‌ನ ಸಂತೋಷ್‌ಕುಮಾರ್ ಶೆಟ್ಟಿ ಅರೆಬೆಟ್ಟು ಮಾತನಾಡಿ, ಇನ್ನೆರಡು ವರ್ಷದಲ್ಲಿ ಶತಮಾನ ಕಾಣುತ್ತಿರುವ ಈ ಶಾಲೆಯ ಅಭಿವೃದ್ಧಿಗೆ ಈಗಾಗಲೇ ೨ ಕೋಟಿ ವೆಚ್ಚದ ಹೊಸ ಶಾಲಾ ಕಟ್ಟಡದ ನೀಲಿ ನಕ್ಷೆ ತಯಾರಾಗಿದ್ದು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಎಲ್ಲರ ಸಹಕಾರದೊಂದಿಗೆ ನೆರವೇರಿಸುವುದಾಗಿ ಭರವಸೆ ನೀಡಿದರು.
ಜಿ.ಪಂ.ಸದಸ್ಯೆ ಮಂಜುಳಾ ಮಾವೆ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರನ್ನೇ ಒಂದು ಆಸ್ತಿಯನ್ನಾಗಿ ಬೆಳೆಸಿ ಎಂದರು. ವಿದ್ಯಾರ್ಥಿಗಳಿಗೆ ಸರಕಾರದಿಂದ ಅನುದಾನ ದೊರೆಯುವ ಸ್ಯಾಂಡಲ್ಸ್ ಅನ್ನು ಮಾವೆ ವಿತರಿಸಿದರು.
ಗುಣಮಟ್ಟದ ಶಿಕ್ಷಣದೊಂದಿಗೆ, ಕಲಿಕೆಗೆ ಪೂರಕವಾದ ವಾತಾವರಣ ಸಮುದಾಯದ ವಿಶ್ವಾಸದಿಂದ ದೊರಕುತ್ತದೆ. ಇದರಿಂದ ಸರಕಾರಿ ಶಾಲೆಗಳ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ಶಾಲೆಗಳಲ್ಲಿ ಮಜಿ ಶಾಲೆ ’ಎ’ ಗ್ರೇಡ್‌ನಲ್ಲಿರುವುದು ಹೆಮ್ಮೆಯ ವಿಷಯ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಹೇಳಿದರು.
ಕಾರ್ಪೋರೇಶನ್ ಬ್ಯಾಂಕ್‌ನ ನಿವೃತ ಅಧಿಕಾರಿಗಳ ಸಂಘ ಮಂಗಳೂರು ಅಧ್ಯಕ್ಷರಾದ ರಾಗಭೂಷಣ್ ಎಚ್. ರವರು ತಮ್ಮ ಸಂಸ್ಥೆಯಿಂದ ಶಾಲೆಗೆ ನೀಡಲಾದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ಅಧ್ಯಕ್ಷ ಸ್ಥಾನವನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಲ್ ಅಂಡ್ ಟಿ ಕಂಪೆನಿಯ ಪ್ರೋಜೆಕ್ಟ್ ಮ್ಯಾನೇಜರ್ ಆನಂದ್, ಸಿ.ಆರ್.ಪಿ. ನಾರಾಯಣ ಗೌಡ, ಎಸ್.ಕೆ.ಪಿ.ಎ. ಬಂಟ್ವಾಳ ವಲಯಾಧ್ಯಕ್ಷರಾದ ಹರೀಶ್ ಮಾಣಿ, ಒಡಿಯೂರು ಗ್ರಾಮಾಭಿವೃದ್ಧಿ ಯೋಜನಾ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ತಾಲೂಕು ಪಂಚಾಯತ್ ಸದಸ್ಯೆ ಗೀತಾ ಚಂದ್ರಶೇಖರ್, ವೀರಕಂಭ ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ, ರಾಮಚಂದ್ರ ಪ್ರಭು, ಜನಾರ್ಧನ ನಾರುಕೋಡಿ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ, ಧ.ಗ್ರಾ.ಯೋಜನೆ ವೀರಕಂಭ ಒಕ್ಕೂಟದ ಸೇವಾ ಪ್ರತಿನಿಧಿ ರೇವತಿ, ಪ್ರಸಾದ್ ನಂದಂತಿಮಾರು, ಕೆ.ಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
Be the first to comment on "ಗ್ರಾಮೀಣ ಪ್ರತಿಭೆಗಳೇ ಕಲಿಕೆಯಲ್ಲಿ ಮುಂದೆ: ರಾಜೇಶ್ ನಾಯ್ಕ್"