ಗರ್ಭಿಣಿ, ಬಾಣಂತಿಯರು ದಿನಂಪ್ರತಿ ಅಂಗನವಾಡಿ ಕೇಂದ್ರಗಳಿಗೆ ಬಂದು ಮಧ್ಯಾಹ್ನದ ಬಿಸಿಯೂಟ ಹಾಗೂ ನಿಗದಿತ ಮಾತ್ರೆಗಳನ್ನು ಸೇವಿಸಬೇಕೆಂಬ ಮಾತೃಪೂರ್ಣ ಯೋಜನೆಯ ಅನುಷ್ಠಾನ ಕ್ರಮಗಳನ್ನು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬದಲಾವಣೆಗೊಳಿಸಲು ಯೋಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಡಾ. ಜಯಮಾಲ ಭರವಸೆ ನೀಡಿದ್ದಾರೆ.
ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ನಿಯೋಗ ಇತ್ತೀಚೆಗೆ ಸಚಿವೆ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭ ಅವರ ಜೊತೆ ಮಾತುಕತೆ ನಡೆಸಿ ಮಾತೃಪೂರ್ಣ ಯೋಜನೆಯ ವಿಫಲತೆಗೆ ಕಾರಣವಾದ ಅಂಶಗಳನ್ನು ಮನವರಿಕೆ ಮಾಡಿದೆ. ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ಸಚಿವ ಬಿ.ರಮಾನಾಥ ರೈಯವರು ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಯೋಜನೆಯ ಅನುಷ್ಠಾನ ಕ್ರಮಗಳು ಖಂಡಿತಾ ಬದಲಾಗಬೇಕು ಎಂದು ಸಚಿವೆಯನ್ನು ಒತ್ತಾಯಿಸಿದರು. ಇಲಾಖಾ ಉಪನಿರ್ದೇಶಕ ಸುಂದರ ಪೂಜಾರಿ ದ.ಕ.ಜಿಲ್ಲೆಯಲ್ಲಿ ಈ ಯೋಜನೆಯು ಶೇ.24ರಷ್ಟು ಮಾತ್ರ ಯಶಸ್ವಿಯಾಗಿರುವುದಾಗಿ ಮಾಹಿತಿ ನೀಡಿದರು.
ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮನೆಯಲ್ಲಿಯೂ ಸಚಿವೆಯನ್ನು ಸಂಘದ ಪ್ರಮುಖರು ಭೇಟಿಯಾಗಿ ಮಾತೃಪೂರ್ಣ ಯೋಜನೆಯ ಸಾಧಕ ಭಾದಕ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಗದಿತ ಸಮಯದಲ್ಲಿ ಗೌರವಧನ ಪಾವತಿಯಾಗದಿರುವ ಬಗ್ಗೆಯೂ ಗಮನ ಸೆಳೆಯಲಾಗಿತ್ತು. ಅಲ್ಲದೆ ವಸತಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ, ಶಾಸಕ ರಾಜೇಶ್ ನಾಕ್ ಅವರನ್ನು ಭೇಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸಂಘದ ನಿಯೋಗದಲ್ಲಿ ಅಧ್ಯಕ್ಷೆ ಉಮಾವತಿ ಬಾಳ್ತಿಲ, ಗೌರವಾಧ್ಯಕ್ಷೆ ರೇಣುಕಾ ಪೊಳಲಿ, ನಿರ್ದೇಶಕಿ ಉಷಾ ಎ.ಎಂ., ಉಪಾಧ್ಯಕ್ಷೆ ಜಯಶ್ರೀ ಕೋಡಪದವು, ಕಾರ್ಯದರ್ಶಿ ರೇಖಾ ಇರಾ, ಉಪಕಾರ್ಯದರ್ಶಿ ಸುಲತಾ, ಕೋಶಾಧಿಕಾರಿ ಭಾರತಿ ನಾವೂರು, ಸಂಘಟನಾ ಕಾರ್ಯದರ್ಶಿ ವಿಜಯವಾಣಿ ಶೆಟ್ಟಿ, ಯಮುನಾ ಕಲ್ಲಡ್ಕ, ಉಷಾ ತಲೆಮೊಗ್ರು, ಸುಮನಾ ಕೊಳ್ನಾಡು, ಚಂಚಲಾಕ್ಷಿ, ಸುಮತಿ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಮಾತೃಪೂರ್ಣ ಯೋಜನೆ ದ.ಕ. ಉಡುಪಿಯಲ್ಲಿ ಬದಲಾವಣೆಗೆ ಚಿಂತನೆ: ಜಯಮಾಲಾ"