ಕುರಿಯಾಳ ಗ್ರಾಮದ ಪಾಪುತಡ್ಕ ಎಂಬಲ್ಲಿ ಮನೆಯಲ್ಲಿ ಒಂಟಿ ಮಹಿಳೆಗೆ ಚಾಕು ತೋರಿಸಿ ನಗದು ಹಣ ದೋಚಿ ಪರಾರಿಯಾದ ಪ್ರಕರಣ ಮತ್ತು ಭಟ್ಕಳದಲ್ಲಿ ಕಳವು ಮಾಡಿದ ಪ್ರಕರಣದ ಆರೋಪಿಗಳೀಗ ಬಂಟ್ವಾಳ ಪೊಲೀಸರ ವಶದಲ್ಲಿದ್ದಾರೆ.
ಕುರಿಯಾಳ ಗ್ರಾಮದ ಪಾಪುತಡ್ಕ ನಿವಾಸಿ ಜಗನ್ನಾಥ ಪೂಜಾರಿ ಎಂಬವರ ಮನೆಯಲ್ಲಿ ಗುರುವಾರ ಬೆಳಿಗ್ಗೆ ಅವರ ಪತ್ನಿ ಒಂಟಿಯಾಗಿದ್ದ ವೇಳೆ ಆಗಮಿಸಿದ ವ್ಯಕ್ತಿ ಚಾಕು ತೋರಿ ಚಿನ್ನ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದ.
ಮನೆಗೆ ಆಗಮಿಸಿದ ವ್ಯಕ್ತಿ ಮನೆಗೆ ಪ್ರವೇಶಿಸಿ ಮಹಿಳೆಯ ಮುಖಕ್ಕೆ ಬಟ್ಟೆ ಕಟ್ಟಿ ಬೊಬ್ಬೆ ಹಾಕಿದರೆ ಸಾಯಿಸುತ್ತೇನೆ ಎಂದು ಬೆದರಿಸಿ ಮನೆಯ ಕಪಾಟಿನಲ್ಲಿದ್ದ 80 ಪವನ್ ಚಿನ್ನ ಹಾಗೂ ನಗದು ಹಣವನ್ನೂ ದೋಚಿಕೊಂಡು ಪರಾರಿಯಾಗಿದ್ದಾಗಿ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಶಯದ ಮೇರೆಗೆ ಸ್ಥಳೀಯ ನಿವಾಸಿ ಶೇಖರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರ ನಿರ್ದೇಶನದಂತೆ ಎಡಿಶನಲ್ ಎಸ್ಪಿ ಸಜಿತ್, ಬಂಟ್ವಾಳ ಸಿಐ ಟಿ ಡಿ ನಾಗರಾಜ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಅವರು ಪ್ರಕರಣವನ್ನು ಬೇಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸ್ಸೈ ರಮೇಶ್, ಬಶೀರ್, ಎಚ್‍ಸಿಗಳಾದ ಗಿರೀಶ್, ಸುರೇಶ್, ವಿಜಯ ಕುಮಾರ್, ಪಿಸಿಗಳಾಧ ನಝೀರ್, ಮನೋಜ್, ಬಸವರಾಜ್, ಆದರ್ಶ ಹಾಗೂ ಲೋಲಾಕ್ಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
ಇನ್ನೊಂದು ಪ್ರಕರಣದಲ್ಲಿ ಭಟ್ಕಳ ತಾಲೂಕಿನ ಶಿರಾಲಿ ಎಂಬಲ್ಲಿ ಮನೆ ಕಳ್ಳತನ ನಡೆಸಿ ಚಿನ್ನಾಭರಣಗಳನ್ನು ಚೀಲದಲ್ಲಿ ಹಾಕಿ ಗುರುವಾರ ಬಂಟ್ವಾಳ ರೈಲ್ವೇ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದರು.
ಮಂಗಳೂರು ತಾಲೂಕು, ಕಟೀಲು ಸಮೀಪದ ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ಮನೆ ನಿವಾಸಿ ವಾಸುದೇವ ಪ್ರಭು ಎಂಬವರ ಪುತ್ರ ಉಮಾನಾಥ ಪ್ರಭು (51) ಎಂಬಾತನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಎಸ್ಸೈ ಹರೀಶ್ ಅವರಿಗೆ ಆರೋಪಿ ಪೊಲೀಸರಿಗೆ ಸಂಶಯ ಬರುವಂತೆ ವರ್ತಿಸಿದ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿತ್ತು.
ಆರೋಪಿಯ ಕೈಯಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ 5,445 ರೂಪಾಯಿ ಮೌಲ್ಯದ 123.770 ಗ್ರಾಂ ಬೆಳ್ಳಿ ಹಾಗೂ 3,05,043 ರೂಪಾಯಿ ಮೌಲ್ಯದ 108.750 ಗ್ರಾಂ ಚಿನ್ನದ ಆಭರಣಗಳು ಮತ್ತು 52,390 ರೂಪಾಯಿ ಮೌಲ್ಯದ ನಗದು ಹಣ ಪತ್ತೆಯಾಗಿವೆ. ಈತನನ್ನು ಮತ್ತೆ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ 39.98 ಗ್ರಾಂ ಚಿನ್ನಾಭಾರಣ ಅಡವಿರಿಸುವ ಬಗ್ಗೆ ಮಾಹಿತಿ ನೀಡಿದ್ದು, ಅದನ್ನೂ ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ ಹೀಗೆ ಈತನ ಬಳಿಯಿರುವ ಒಟ್ಟು 4,75,021 ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬಂಟ್ವಾಳ ಎಎಸ್ಪಿ ರಿಷಿಕೇಶ್ ಸೊನಾವಣೆ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ ಡಿ ನಾಗರಾಜ್, ನಗರ ಠಾಣಾಧಿಕಾರಿ ಚಂದ್ರಶೇಖರ್, ಅಪರಾಧ ವಿಭಾಗದ ಅಧಿಕಾರಿ ಹರೀಶ್, ನಗರ ಠಾಣಾ ಪ್ರೊಬೆಷನರಿ ಪಿಎಸ್ಸೈ ಸೌಮ್ಯ, ಎಸ್ಸೈ ಸಂಜೀವ, ಜಿನ್ನಪ್ಪ ಗೌಡ, ಎಚ್ ಸಿ ಚೋಮಾ ಸುರೇಶ್, ಪಿಸಿಗಳಾದ ಉಮೇಶ್ ಹಿರೇಮಠ, ಮಲ್ಲಿಕಾಸಾಬ, ಕುಮಾರ, ಸದಾಶಿವ ಪಾಲ್ಗೊಂಡಿದ್ದರು.
Be the first to comment on "ಬಂಟ್ವಾಳ ಪೊಲೀಸರಿಂದ ಪ್ರತ್ಯೇಕ ಕಾರ್ಯಾಚರಣೆ: ಇಬ್ಬರು ಆರೋಪಿಗಳು ಅಂದರ್"