ವಿಶೇಷ ಮಕ್ಕಳಿಗಾಗಿ ಬೆಂಗಳೂರು ಅಥವಾ ಮಂಗಳೂರಿನಲ್ಲಿ ರಾಷ್ಟ್ರೀಯ ಒಲಂಪಿಕ್ಸ್ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಹಿದಾಯ ಫೌಂಡೇಶನ್ ಮಂಗಳೂರು ವತಿಯಿಂದ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯ ಹಿದಾಯ ಶೇರ್ ಆಂಡ್ ಕೇರ್ ಕಾಲನಿಯ ಎಸೆಸೆಲ್ಸಿ ಹಾಗೂ ವಿಶೇಷ ಮಕ್ಕಳಿಗಾಗಿ ಸ್ಮಾರ್ಟ್ ಕ್ಲಾಸ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾಲನಿಯ ನಿವಾಸಿಗಳಿಗೆ ಸರಕಾರದ ಯೋಜನೆಯ ಸೌಲಭ್ಯಗಳನ್ನು ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಬಡವರ ಏಳಿಗೆಗೆ ಕಾರ್ಯ ನಿರ್ವಹಿಸುತ್ತಿರುವ ಹಿದಾಯ ಫೌಂಡೇಶನ್ ಕಾರ್ಯ ಅಭಿನಂದನೀಯ, ಜಾಮ ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸದೇ ದಯೆ ತೋರುವ ಗುಣ ಮನುಷ್ಯತ್ವವಾಗಿದೆ ಎಂದು ಹೇಳಿದರು.
ಹಿದಾಯ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಎಚ್.ಕೆ.ಖಾಸಿಂ ಅಹ್ಮದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲನಿಯಲ್ಲಿನ ೫೦ ಮನೆಗಳು, ಹಿದಾಯ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ, ಕಮ್ಯುನಿಟಿ ಡೆವೆಲಪ್‌ಮೆಂಟ್ ಸೆಂಟರ್, ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಸಿದ್ಧ ಉಡುಪು ತಯಾರಿಕಾ ಕೇಂದ್ರ, ಇಂಗ್ಲಿಷ್ ಅರೆಬಿಕ್ ಕಲಿಕಾ ಕೇಂದ್ರ ಹಾಗು ವಿವಿಧ ಘಟಕಗಳ ಬಗ್ಗೆ ಮಾಹಿತಿ ನೀಡಿದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್ ಹಾಜಿ, ಬ್ಯಾರೀಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ನ ಚೇಯರ್‌ಮೆನ್ ಸೈಯದ್ ಮುಹಮ್ಮದ್ ಬ್ಯಾರಿ, ಭಾರತ್ ಇನ್‌ಫ್ರಾಟೆಕ್ ಚೇಯರ್‌ಮೆನ್ ಮುಸ್ತಾಫ ಎಸ್. ಎಂ., ಫೌಂಡೇಶನ್‌ನ ಘಟಕಗಳ ಅಧ್ಯಕ್ಷರಾದ ಅಬ್ದುಲ್ ರಝಾಕ್, ಜಲೀಲ್, ಸಲೀಂ, ಅಹ್ಮದ್ ಬಾವ, ಇಲ್ಯಾಸ್, ಹಂಝದ್, ಝಕರಿಯಾ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಕಾಲನಿಯ ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಫೌಂಡೇಶನ್ ಕಾರ್ಯದರ್ಶಿ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಅವರು ಕಾಲನಿಯ ಸಾಧಕ ವಿದ್ಯಾರ್ಥಿಗಳ ಸಾಧನೆ ಬಗ್ಗೆ ವಿವರ ನೀಡಿದರು. ಫೌಂಡೇಶನ್ ಅಧಯಕ್ಷ ಹನೀಫ್ ಹಾಜಿ ಕಲ್ಲಡ್ಕ ಸ್ವಾಗತಿಸಿದರು. ಝಮೀರ್ ಅಸ್ಗರ್ ವಂದಿಸಿದರು. ಕೆ.ಎಸ್. ಅಬೂಬಕರ್ ಸಹಕರಿಸಿದರು. ಹಮೀದ್ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಂಗಳೂರಲ್ಲಿ ವಿಶೇಷ ಮಕ್ಕಳಿಗೆ ರಾಷ್ಟ್ರೀಯ ಒಲಂಪಿಕ್ಸ್ ಆಯೋಜನೆಗೆ ಪ್ರಯತ್ನ: ಯು.ಟಿ.ಖಾದರ್"