- ರೋಟರಿ ಕ್ಲಬ್ ಬಂಟ್ವಾಳ ಟೌನ್ ಪದಗ್ರಹಣ
ಮಾನವೀಯ ಸಂಬಂಧಗಳು ಇಂದು ಸಂದರ್ಭಕ್ಕೆ ಅನುಸಾರವಾಗಿ ಬದಲಾಗುತ್ತಿರುವ ಹಾಗೂ ಸ್ನೇಹಸೌಹಾರ್ದ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಬಾಂಧವ್ಯ ವೃದ್ಧಿ ಹಾಗೂ ಸಮಾಜದಲ್ಲಿರುವ ಆರ್ತರಿಗೆ ನೆರವು ನೀಡುವ ಅವಕಾಶವನ್ನು ರೋಟರಿ ಸಂಸ್ಥೆ ನೀಡುತ್ತಿದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಸಹ ತರಬೇತುದಾರ ಬಿ.ಶೇಖರ ಶೆಟ್ಟಿ ಹೇಳಿದರು.
ಭಾನುವಾರ ರಾತ್ರಿ ಬಿ.ಸಿ.ರೋಡಿನ ರೋಟರಿ ಕ್ಲಬ್ ಗೋಲ್ಡನ್ ಜ್ಯುಬಿಲಿ ಹಾಲ್ ನಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಇಂದು ಮತ್ತೊಬ್ಬನನ್ನು ಕಂಡು ಮುಗುಳ್ನಗಲೂ ಹಿಂಜರಿಯುವ ಪರಿಸ್ಥಿತಿಗೆ ನಮ್ಮ ಜೀವನಪದ್ಧತಿ ಬಂದು ನಿಂತಿದೆ. ಮತ್ತಷ್ಟು ಲೋಭಿ, ಸ್ವಾರ್ಥಿಗಳಾಗುತ್ತಿರುವ ನಮಗೆ ಬಡತನ ಇದೆಯೇ ಎಂದು ಪ್ರಶ್ನಿಸುವವರು ಇದ್ದಾರೆ. ಇಂಥ ಸನ್ನಿವೇಶದಲ್ಲಿ ಸಮಾಜದ ಬಡವರು, ಸಹಾಯದ ಅಗತ್ಯವುಳ್ಳವರನ್ನು ಗುರುತಿಸಿ ಅವರಿಗೆ ಆರ್ಥಿಕವಾಗಿ ಶ್ರೀಮಂತರಾದವರಿಂದ ನೆರವು ನೀಡುವ ಸಂಪರ್ಕ ಸೇತುವಾಗಿ ಹಾಗೂ ಜನಸಾಮಾನ್ಯರ ಕಷ್ಟಗಳನ್ನು ಅರಿತು ಸ್ಪಂದಿಸಿ ಅವರ ಹೃದಯ ಗೆಲ್ಲುವ ಕೆಲಸವನ್ನು ರೋಟರಿ ಮಾಡುತ್ತಿದೆ ಎಂದರು.
ಮುಖ್ಯ ಅತಿಥಿ ವಲಯ 4ರ ಅಸಿಸ್ಟೆಂಟ್ ಗವರ್ನರ್ ಎನ್. ಪ್ರಕಾಶ್ ಕಾರಂತ ಮಾತನಾಡಿ, ರೋಟರಿ ಕ್ಲಬ್ ಸದಸ್ಯರನ್ನು ಹೆಚ್ಚಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ರೋಟರಿ ಜೋನಲ್ ಲೆಫ್ಟಿನೆಂಟ್ ಸಂಜೀವ ಪೂಜಾರಿ ಗುರುಕೃಪ, ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ ಮಂಜುನಾಥ ಆಚಾರ್ಯ ಶುಭ ಹಾರೈಸಿದರು. ಸವಿತಾ ನಿರ್ಮಲ್ ಉಪಸ್ಥಿತರಿದ್ದರು.
ಅಧಿಕಾರ ಸ್ವೀಕಾರ:
ಈ ಸಂದರ್ಭ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಉಮೇಶ್ ನಿರ್ಮಲ್ ಮಾತನಾಡಿ, ಆಶಾ ಸ್ಫೂರ್ತಿ ಯೋಜನೆಯಡಿ ಜಿಲ್ಲೆಯ ಅಂಗನವಾಡಿಗಳಿಗೆ ನೆರವು ನೀಡುವ ಕಾರ್ಯಕ್ರಮದಡಿ ತುಂಬೆ ಪರಿಸರದ ಅಂಗನವಾಡಿಗಳಿಗೆ ನೆರವು ನೀಡುವ ವಿಚಾರವನ್ನು ಪ್ರಸ್ತಾಪಿಸಿದರು. ಕಾರ್ಯದರ್ಶಿಯಾಗಿ ಜಯರಾಜ್ ಎಸ್. ಬಂಗೇರ, ಉಪಾಧ್ಯಕ್ಷರಾಗಿ ಪಲ್ಲವಿ ಕಾರಂತ, ಕೋಶಾಧಿಕಾರಿಯಾಗಿ ಆಶಾಮಣಿ ಡಿ. ರೈ, ಜೊತೆ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ರಂಗೋಲಿ, ಆಡಳಿತ ಮಂಡಳಿಯ ಕ್ಲಬ್ ಸರ್ವೀಸ್ ಗೆ ಶಂಕರ್ ಶೆಟ್ಟಿ, ಸಮುದಾಯ ಸೇವೆಯ ಶಾಂತರಾಜ್, ವೊಕೇಶನಲ್ ಸರ್ವೀಸ್ ಗೆ ಮಹಮ್ಮದ್ ಮುನೀರ್, ಅಂತಾರಾಷ್ಟ್ರೀಯ ಸೇವೆಗೆ ಜೀವನ್ ಲಾಯ್ಡ್ ಪಿಂಟೊ, ಯುವಜನ ಸೇವೆಗೆ ಶನ್ ಫತ್ ಶರೀಫ್, ಟಿ.ಆರ್.ಎಫ್ ದಯಾನಂದ ಶೆಟ್ಟಿ, ಸದಸ್ಯತನ ಅಭಿವೃದ್ಧಿ ವಿಭಾಗಕ್ಕೆ ಸುಧಾಕರ ಸಾಲ್ಯಾನ್ ಮತ್ತು ಪಲ್ಸ್ ಪೋಲಿಯೊ ವಿಭಾಗಕ್ಕೆ ಡಾ. ಸಂತೋಷ್ ಬಾಬು ಆಯ್ಕೆಯಾಗಿದ್ದು, ಅವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಶಾಲಾ ವಿದ್ಯಾರ್ಥಿನಿಗೆ ಉಚಿತ ಕನ್ನಡಕ ವಿತರಣೆ ನೀಡಲಾಯಿತು. ನ್ಯಾಯವಾದಿ ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಮಾನವೀಯ ಸಂಬಂಧ ವೃದ್ಧಿಗೆ ರೋಟರಿ ಕ್ಲಬ್ ಅವಕಾಶ: ಶೇಖರ ಶೆಟ್ಟಿ"