ಕೊನೆಗೂ ಬಂಟ್ವಾಳ ಪೊಲೀಸ್ ಉಪವಿಭಾಗಕ್ಕೆ ಎಎಸ್ಪಿ ನಿಯುಕ್ತಿಯಾಗಿದೆ. ಐಪಿಎಸ್ ಅಧಿಕಾರಿ ರಿಷಿಕೇಶ್ ಭಗವಾನ್ ಅವರು ಗುರುವಾರ ಡಿವೈಎಸ್ಪಿ ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಕಾರ್ಕಳದಲ್ಲಿ ಎ.ಎಸ್.ಪಿಯಾಗಿ ಕಾರ್ಯ ನಿರ್ವಹಿಸಿರುವ ರಿಷಿಕೇಶ್ ಅವರು ಇದೀಗ ಬಂಟ್ವಾಳ ಉಪವಿಭಾಗಕ್ಕೆ ಎ.ಎಸ್.ಪಿ.ಯಾಗಿ ವರ್ಗಾವಣೆಗೊಂಡಿದ್ದಾರೆ. ಅರುಣ್ ಕುಮಾರ್ ಐ.ಪಿ.ಎಸ್ ಬಳಿಕ ತೆರವಾಗಿದ್ದ ಬಂಟ್ವಾಳ ಉಪವಿಭಾಗಕ್ಕೆ ವಿಧಾನ ಸಭಾ ಚುನಾವಣೆ ಯ ಸಂದರ್ಭದಲ್ಲಿ ಪ್ರಭಾರ ಡಿ.ವೈ.ಎಸ್.ಪಿ.ಯಾಗಿ ಡಿ.ಕುಮಾರ್ ಅವರನ್ನು ನಿಯೋಜಿಸಲಾತ್ತು.
ಕಳೆದ ವರ್ಷ ನಿಷೇಧಾಜ್ಞೆ ಅವಧಿಯಲ್ಲಿ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿತ್ತು. ಎಸ್ಪಿ, ಎಡಿಶನಲ್ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ನಡೆದವು. ಡಿವೈಎಸ್ಪಿ ಬದಲು ಎಎಸ್ಪಿ ಡಾ. ಅರುಣ್ ಬಂದು ಕೆಲಕಾಲ ಕೆಲಸ ನಿರ್ವಹಿಸಿ ವರ್ಗಾವಣೆ ಹೊಂದಿದರು. ಆದರೆ ಅವರ ಬದಲಿಗೆ ಪೂರ್ಣಕಾಲಿಕವಾಗಿ ಹುದ್ದೆ ನಿರ್ವಹಿಸಲು ಯಾರೂ ಬರಲಿಲ್ಲ. ಒಂದು ಹಂತದಲ್ಲಿ ಎಡಿಶನಲ್ ಎಸ್ಪಿ ಬಂಟ್ವಾಳದಲ್ಲೇ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿತ್ತು. ಆದರೆ ಎಡಿಶನಲ್ ಎಸ್ಪಿ ಬಿಡಿ, ಎಎಸ್ಪಿ ಹುದ್ದೆಯ ಅಧಿಕಾರಿಯೂ ಬಂಟ್ವಾಳದಲ್ಲಿ ಕುಳಿತುಕೊಂಡಿರಲಿಲ್ಲ.
ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಒಳಪಟ್ಟಂತೆ ಬಿ.ಸಿ.ರೋಡ್ ನಲ್ಲಿರುವ ಹಳೇ ಪೊಲೀಸ್ ಠಾಣೆ ಕಟ್ಟಡದಲ್ಲಿ ಎಎಸ್ಪಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. 2013 ರಲ್ಲಿ ಬಂಟ್ವಾಳ ಉಪವಿಭಾಗ ಪೋಲೀಸ್ ಕಚೇರಿ ಬಿ.ಸಿ.ರೋಡಿನಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಡಿ.ವೈ.ಎಸ್.ಪಿ. ಸದಾನಂದ ವರ್ಣೇಕರ್, ಡಿ ವೈ.ಎಸ್.ಪಿ.ರಶ್ಮೀ ಪರಡ್ಡಿ, ಎ.ಎಸ್.ಪಿ. ರಾಹುಲ್ ಕುಮಾರ್, ಡಿ.ವೈ.ಎಸ್.ಪಿ.ರವೀಶ್ ಮತ್ತು ಎ.ಎಸ್.ಪಿ.ಅರುಣ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದರು. ಅರುಣ್ ಕುಮಾರ್ ಅವರು ಲೋಕಾಯುಕ್ತ ಎಸ್.ಪಿ.ಯಾಗಿ ಬೆಂಗಳೂರು ನಗರಕ್ಕೆ ವರ್ಗಾವಣೆಯಾದ ಬಳಿಕ ಪ್ರಭಾರ ಡಿವೈಎಸ್ಪಿಯಾಗಿ ಕುಮಾರ್ ನಿಯುಕ್ತಿಗೊಂಡಿದ್ದರು.
Be the first to comment on "ಕೊನೆಗೂ ಬಂಟ್ವಾಳಕ್ಕೆ ಎಎಸ್ಪಿ ನಿಯುಕ್ತಿ, ಅಧಿಕಾರ ಸ್ವೀಕಾರ"