ಹರೀಶ ಮಾಂಬಾಡಿ, www.bantwalnews.com
ಈ ಚಿತ್ರ ನೋಡಬೇಕಿದ್ದರೆ ನೀವು ಬಿ.ಸಿ.ರೋಡಿಗೆ ಬರಲೇಬೇಕು. ಒಂದು ಮಳೆ ಬಂದರೂ ಸಾಕು. ಫ್ಲೈ ಓವರ್ ನಲ್ಲಿ ವಾಹನಗಳು ಸಾಗುತ್ತಿದ್ದಂತೆ ನೀರು ಅಲ್ಲಿಂದ ನೇರವಾಗಿ ಹಾರಿ ಕೆಳಗೆ ಬೀಳುತ್ತದೆ. ಮಳೆ ಒಂದು ವೇಳೆ ನಿಂತರೂ ಪ್ರೋಕ್ಷಣೆ ಇದ್ದೇ ಇರುತ್ತದೆ. ಕೆಳಗೆ ನಡೆದುಕೊಂಡು ಹೋಗುವವರಿಗೆ ಫ್ರೀ ಸ್ನಾನ!!! ಇದು ಬಿ.ಸಿ.ರೋಡ್ ನ ಚಿತ್ರಣವನ್ನೇ ಬದಲಾಯಿಸಿದ ಫ್ಲೈಓವರ್ ಕೊಡುಗೆ.
ಹಾಗೆಯೇ ಮಂಗಳವಾರ ಸುರಿದ ಭಾರಿ ಮಳೆಗೆ ಬಂಟ್ವಾಳ, ಬಿ.ಸಿ.ರೋಡ್ ನಲ್ಲಿ ಕೃತಕ ನೆರೆ ಕಂಡುಬಂತು. ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಸರ್ವೀಸ್ ರಸ್ತೆಯನ್ನು ಎತ್ತರವಾಗಿಸಿದ್ದರಿಂದ ಫ್ಲೈಓವರ್ ಬಳಿ ನೀರು ಸಂಗ್ರಹವಾಗಿ ಪಾದಚಾರಿಗಳಷ್ಟೇ ಅಲ್ಲ, ವಾಹನ ಸವಾರರೂ ಪರದಾಡುವಂತಾಯಿತು.
ಭಾರಿ ಮಳೆಗೆ ಶಾಲಾರಂಭದ ಉತ್ಸಾಹದಲ್ಲಿದ್ದ ಮಕ್ಕಳು ತೊಂದರೆ ಅನುಭವಿಸಬೇಕಾಯಿತು. ಬಸ್ ನಿಲ್ದಾಣ, ಶಾಲೆ, ಕಚೇರಿ, ಅಂಗಡಿಗಳಿಗೆ ತೆರಳಿದ ಜನರು ತೊಂದರೆಗೆ ಒಳಗಾದರು.
ಸರ್ವೀಸ್ ರಸ್ತೆ ಕೆಲವು ಕಡೆ ಎತ್ತರ, ಕೆಲವೆಡೆ ತಗ್ಗು, ಕೆಲವೆಡೆ ನೀರು ಹರಿದು ಹೋಗಲು ಜಾಗ ಇಲ್ಲದ ಕಾರಣ ಸಮಸ್ಯೆ ಉಂಟಾಯಿತು. ಬಿ.ಸಿ.ರೋಡ್ ನ ಮಂಗಳೂರು ಬಸ್ ನಿಲ್ಲುವ ಜಾಗದಲ್ಲಿ ನೀರು ತುಂಬಿ ನಿಂತರೆ, ಅದರ ಹಿಂದೆ ತಾಪಂ ಕಟ್ಟಡ ಕೆಡಹಿದ ಕಾರಣ ಅಲ್ಲಿಂದ ಮಣ್ಣು ಕರಗಿ ರಸ್ತೆಗೆ ಬರುತ್ತಿದೆ. ಫ್ಲೈಓವರ್ ಅಡಿಯಲ್ಲಿ ನೀರು ನಿಂತರೆ, ಫ್ಲೈಓವರ್ ಮೇಲಿನಿಂದ ವಾಹನ ಸಂಚರಿಸುವಾಗಲೆಲ್ಲ ನೀರು ಕೆಳಗೆ ಚಿಮ್ಮುತ್ತಿರುವ ದೃಶ್ಯ ಕಂಡುಬಂತು. ಕೈಕಂಬ, ಪೊಳಲಿ ದ್ವಾರದ ಸಮೀಪ ಸಹಿತ ರಾಷ್ಟ್ರೀಯ ಹೆದ್ದಾರಿಯ ನಟ್ಟನಡುವೆ ನೀರು ನಿಂತು ವಾಹನ ಸವಾರರು ಗೊಂದಲಕ್ಕೊಳಗಾದರು.
Be the first to comment on "ಮಳೆ ಬಂದರೆ ಫ್ಲೈಓವರ್ ನಿಂದ ಚಿಮ್ಮುತ್ತದೆ ನೀರಿನ ಕಾರಂಜಿ!!!"