ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕವಾಗಿ ಐಟಿ ದಾಳಿ ನಡೆಸುವ ಮೂಲಕ ಕೇಂದ್ರ ಸರಕಾರ ಇಲಾಖೆಯನ್ನು ರಾಜಕೀಯವಾಗಿ ದುರುಪಯೋಗಮಾಡಿಕೊಳ್ಳುತ್ತಿದೆ. ನಿಮ್ಮ ಯಾವುದೇ ದಾಳಿಗೂ ಕಾಂಗ್ರೆಸ್ ಬಗ್ಗುವುದಿಲ್ಲ ಎಂದು ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹೇಳಿದೆ .
ಗುರುವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಕರೆದ ಜಂಟಿಸುದ್ದಿಗೋಷ್ಠಿಯಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ಅಬ್ಬಾಸ್ ಅಲಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್ ಮಾತನಾಡಿ, ಬಂಟ್ವಾಳದಲ್ಲಿ ಕಾಂಗ್ರೆಸ್ ನಾಯಕರಿಗೆ ಸೇರಿದ ವಿವಿಧ ವಸತಿಗೃಹಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿದರು.
ಬಂಟ್ವಾಳ ಕಾಂಗ್ರೆಸ್ ಕಳೆದ ಒಂದು ವರ್ಷದಿಂದ ಚುನಾವಣಾ ತಯಾರಿ ಮಾಡುತ್ತ ಬಂದಿದ್ದು, ಎಲ್ಲ ಮಟ್ಟದಲ್ಲೂ ಸಮಿತಿಗಳ ರಚನೆ ಮಾಡಿ ಪದಾಧಿಕಾರಿಗಳನ್ನು ನೇಮಕ ಮಾಡಿದೆ. ಬೂತ್ ಮಟ್ಟದಲ್ಲಿ ಮನೆ ಮನೆ ಪ್ರಚಾರ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಸಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಇಲ್ಲಿನ ಕಾಂಗ್ರೆಸ್ ಒಗ್ಗಟ್ಟಿನಲ್ಲಿ ದುಡಿಯುತ್ತಿದೆ. ವೇಣುಗೋಪಾಲ್ ಅವರು ಕರ್ನಾಟಕದ ಉಸ್ತುವಾರಿ ಪಡೆದುಕೊಂಡ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಬಹಳಷ್ಟು ಶಕ್ತಿಯುತವಾಗಿ ಬೆಳೆದಿದೆ. ಇದಕ್ಕೆ ಪೂರಕವಾಗಿ ಎಂಬಂತೆ ಸಿದ್ದರಾಮಯ್ಯನವರ ಜನಪರ ಆಡಳಿತವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿದ್ದು, ಕೂಡಾ ರಾಜ್ಯದ ಜನತೆಗೆ ಕಾಂಗ್ರೆಸ್ ಮೇಲಿನ ಪ್ರೀತಿ ಹೆಚ್ಚಲು ಕಾರಣವಾಗಿದೆ ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಮಾತಾನಾಡಿ, ವಿರೋಧ ಪಕ್ಷದ ಅಪಪ್ರಚಾರದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ನಿಷ್ಕ್ರಿಯಗೊಳಿಸುವ ತಂತ್ರಗಾರಿಕೆ ಯಾವತ್ತೂ ಫಲಿಸುವುದಿಲ್ಲ. ಶೇ.95 ರಷ್ಟು ಭರವಸೆಗಳನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟಿರುವ ಸಿದ್ದರಾಮಯ್ಯ ಸರಕಾರಕ್ಕೆ ರಾಜ್ಯದ ಇಡೀ ಜನತೆಯೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರ ಮುಂದೆ ಬಿಜೆಪಿಯವರ ಯಾವ ಅಪಪ್ರಚಾರವೂ ನಡೆಯುವುದಿಲ್ಲ ಎಂದು ಹೇಳಿದ ಅವರು, ರಮಾನಾಥ ರೈಯವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಇಡೀ ರಾಜ್ಯಕ್ಕೆ ಮಾದರಿಯಾಗಿವೆ. ಎಂದು ಹೇಳಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಮಾತಾನಾಡಿ, ಬಂಟ್ವಾಳ ಕ್ಷೇತ್ರದ ಜನರು ರಮಾನಾಥ ರೈ ಅವರ ಬೆನ್ನೆಲುಬಾಗಿ ನಿಂತಿದ್ದಾರೆ ಎಂದ ಅವರು, ಸಿದ್ದರಾಮಯ್ಯನವರು ರೈತರ ಸಾಲ ಮನ್ನಾ ಕಾರ್ಯಕ್ರಮ ಮಾಡುವುದರ ಮೂಲಕ ರಾಜ್ಯದ ರೈತರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೇಬಿ ಕುಂದರ್, ತಾಲೂಕು ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಬಾಲಕೃಷ್ಣ ಆಳ್ವ, ಪರಮೇಶ್ವರ, ಮಧುಸೂಧನ ಶೆಣೈ, ಮಹಮ್ಮದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಯಾವ ದಾಳಿಗೂ ಕಾಂಗ್ರೆಸ್ ಹೆದರುವುದಿಲ್ಲ: ಅಬ್ಬಾಸ್ ಅಲಿ"