ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ತನ್ನ ಹಲವಾರು ಯೋಜನೆಗಳ ಮೂಲಕ ಯುವಕರ ಹಿತಕ್ಕೆ ಗರಿಷ್ಠ ಕೊಡುಗೆ ನೀಡಿದೆ ಎಂದು ಬಂಟ್ವಾಳ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಹೇಳಿದ್ದಾರೆ.
ಬಂಟ್ವಾಳದ ಬಿ.ಸಿ.ರೋಡಿನಲ್ಲಿರುವ ಪಕ್ಷ ಚುನಾವಣಾ ಪ್ರಚಾರ ಸಮಿತಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಬಿ. ರಮಾನಾಥ ರೈ ಅವರೊಂದಿಗೆ ಭಾರೀ ಸಂಖ್ಯೆಯಲ್ಲಿ ಯುವಕರು ಜತೆಗೂಡಿದ್ದು, ರೈ ಆಯ್ಕೆ ಖಚಿತ ಎಂದರು.
ಕಾಂಗ್ರೆಸ್ ಪಕ್ಷವು ಯುವಕರ ಜೀವನಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತದೆ, ಪಕ್ಷವು ಯುವಕರ ಕೈಗೆ ಯೋಗ್ಯ ಜವಾಬ್ದಾರಿ ಹಾಗೂ ಅಧಿಕಾರ ನೀಡುತ್ತ ಬಂದಿದೆ. ಪ್ರಸ್ತುತ ಸಿದ್ದರಾಮಯ್ಯ ಸರಕಾರ ಯುವಕರ ಅಭ್ಯುದಯಕ್ಕೆ ಅನೇಕ ಯೋಜನೆಗಳನ್ನು ಹಾಕಿಕೊಟ್ಟಿದೆ. ಲಕ್ಷಾಂತರ ಮಂದಿ ಯುವಕರು ಪದವಿ ಗಳಿಸಿ ಕಾಲೇಜುಗಳಿಂದ ಹೊರಬರುತ್ತಿದ್ದು, ಅವರಿಗೆ ಸ್ವ-ಉದ್ಯೋಗಕ್ಕೆಒತ್ತು ನೀಡಿದೆ. ದೇಶದಲ್ಲಿ ಒಟ್ಟು ಸೃಷ್ಟಿಯಾದಉದ್ಯೋಗದಲ್ಲಿ 25 ಶೇಕಡಾ ಭಾಗ ಕರ್ನಾಟಕಲ್ಲಿ ಆಗಿರುತ್ತದೆ. ಇದೊಂದು ಹೆಮ್ಮೆಯ ಸಂಗತಿ ಎಂದರು.
ಪ್ರಣಾಳಿಕೆಯಲ್ಲಿ ಆದ್ಯತೆ
ಈ ಬಾರಿಯ ಚುನಾವಣೆಯ ಪ್ರಣಾಳಿಕೆಯಲ್ಲಿ ಪಕ್ಷವು ಯುವಕರಿಗೆ ಅತೀ ಹೆಚ್ಚು ಭರವಸೆಗಳನ್ನು ನೀಡಿರುತ್ತದೆ. ಸರಕಾರಿ ಶಾಲೆಗಳ 12ನೇ ತರಗತಿವರೆಗೆ ಉಚಿತ ಶಿಕ್ಷಣ, 18ರಿಂದ 23 ವರ್ಷ ಪ್ರಾಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ಮಾರ್ಟ ಫೋನ್. ವೃತ್ತಿ ತರಬೇತಿ ವಿಶ್ವವಿದ್ಯಾಲಯವನ್ನು ಕೌಶಲ್ಯಾಭಿವೃದ್ಧಿಗಾಗಿ ರಚನೆ. ಕಾಲೇಜಗಳು ಮತ್ತು ವಿ.ವಿ. ಗಳಲ್ಲಿ ಅಂತರ್ಜಾಲ ಸಂಪರ್ಕ. ಪ್ರೌಢಶಾಲಾ ಹಂತದಲ್ಲಿಯೇ ವೃತ್ತಿಪರ ಶಿಕ್ಷಣ ಆರಂಭ. ರಾಜ್ಯದ ಐದು ವಿ.ವಿ.ಗಳನ್ನು ವಿಶ್ವದರ್ಜೆ ವಿಶ್ವವಿದ್ಯಾಲಯಗಳನ್ನಾಗಿಸುವುದು. ಮೊರಾರ್ಜಿದೇಸಾಯಿ ಶಾಲೆಗಳನ್ನು ಪಿ ಯು ಸಿ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದು, ಸ್ನಾತಕೋತ್ತರ ಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ. ಮೆಟ್ರಿಕ್‌ಗಿಂತ ಕಡಿಮೆ ಓದಿದ ಮಹಿಳೆಯರಿಗೆ ಉಚಿತ ಮೋಟಾರು ವಾಹನ ತರಬೇತಿ ಸಹಿತ ಹಲವಾರು ಯೋಜನೆಗಳಿವೆ ಎಂದು ವಿವರಿಸಿದರು.
ಬಿಜೆಪಿ ಯುವಕರನ್ನು ಧರ್ಮಾಧಾರಿತವಾಗಿ ದಾರಿ ತಪ್ಪಿಸುತ್ತಿದ್ದರೆ, ಕಾಂಗ್ರೆಸ್ ಅವರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತದೆ ಎಂದು ಹೇಳಿದ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀಕೃಷ್ಣ ಮಠಕ್ಕೆ ತೆರಳಲು ಭದ್ರತೆಯ ಹಿನ್ನೆಲೆಯ ಕಾರಣವೊಡ್ಡಿದ್ದನ್ನು ಟೀಕಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ ನಾಯಕ್, ಉಪಾಧ್ಯಕ್ಷ ಚಿತ್ತರಂಜನ ಶೆಟ್ಟಿ ಬೊಂಡಾಲ, ಶಾಕೀರ್ ಬಡಕಬೈಲು, ಇಬ್ರಾಹಿಂ ನವಾಜ್, ನೌಫಾಲ್ ಕನ್ಯಾನ, ವಿಶ್ವನಾಥ ಗೌಡ ಮಣಿ, ಯೋಗೀಶ್ ದಾಸಬೈಲು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "ಯುವಕರ ಹಿತಕ್ಕೆ ಕಾಂಗ್ರೆಸ್ ಗರಿಷ್ಠ ಕೊಡುಗೆ: ಬಂಟ್ವಾಳ ಕ್ಷೇತ್ರ ಯುವ ಕಾಂಗ್ರೆಸ್"