ಕರ್ನಾಟಕ ಚುನಾವಣಾ ಆಯೋಗವು ಹೊರತಂದಿರುವ ಮತದಾರರ ಜಾಗೃತಿ ಮೂಡಿಸುವ ಬೀದಿನಾಟಕಗಳ ಸಂಕಲನ ಓಟು ಹಾಕೋಣ ಬನ್ನಿ ಎಂಬ ಕೃತಿಗೆ ಪತ್ರಕರ್ತ, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ ರಚನೆಯ ಮತ ಮಾರಾಟಕ್ಕಲ್ಲ ಬೀದಿನಾಟಕ ಆಯ್ಕೆಯಾಗಿದೆ.
ಬೆಂಗಳೂರಿನ ಸಿಆರ್‌ಟಿ ಹಾಗೂ ಅಪ್ಸಾ ಸಂಸ್ಥೆ ಜಂಟಿಯಾಗಿ ಬೀದಿನಾಟಕ ಸಂಕಲನವನ್ನು ಸಿದ್ದಪಡಿಸುವ ಜವಬ್ದಾರಿಯನ್ನು ಹೊತ್ತಿದ್ದು, ಅದರಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ಆಯ್ದ ಲೇಖಕರಿಗೆ ಮತದಾರರ ಜಾಗೃತಿಯ ನಾಟಕ ಬರೆಯಲು ನಿರ್ದೇಶನ ನೀಡಲಾಗಿತ್ತು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಮೌನೇಶ ವಿಶ್ವಕರ್ಮ ಮತಮಾರಾಟಕ್ಕಲ್ಲ ಅನ್ನುವ ಬೀದಿನಾಟಕ ಹಾಗೂ ಮತದಾರ ಕೇಳಿಲ್ಲಿ ಎನ್ನುವ ಹಾಡನ್ನು ರಚಿಸಿದ್ದು, ಇವೆರಡೂ ಚುನಾವಣಾ ಆಯೋಗ ಹೊರತಂದಿರುವ ಕೃತಿಯಲ್ಲಿ ಪ್ರಕಟವಾಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯಸ್ಥರು ಈ ಕೃತಿಯನ್ನು ಬಿಡುಗಡೆಗೊಳಿಸಿದ್ದಾರೆ. ನೂರು ಪುಟಗಳ ಈ ಕೃತಿಯಲ್ಲಿ ರಾಜ್ಯದ ವಿವಿಧ ಭಾಗಗಳ ಲೇಖಕರು ರಚಿಸಿದ 15 ಬೀದಿನಾಟಕಗಳು ಪ್ರಕಟವಾಗಿದೆ.
ಮೂಲತಃ ಪುತ್ತೂರು ನಿವಾಸಿಯಾಗಿರುವ ಮೌನೇಶ್ ವಿಶ್ವಕರ್ಮ ಬಂಟ್ವಾಳದಲ್ಲಿ ಪತ್ರಕರ್ತರಾಗಿ ಸೇವೆಸಲ್ಲಿಸುತ್ತಿದ್ದು, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಂಗನಾಟಕ, ಬೀದಿನಾಟಕಗಳ ಸಹಿತ ವಿವಿಧ ತರಬೇತಿಗಳನ್ನು ನೀಡುತ್ತಿರುವ ಇವರು, ೧೫ ಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದು ಮಕ್ಕಳ ಹಕ್ಕುಗಳ ಕುರಿತಾದ ನಾಟಕಗಳ ಸಂಕಲನ ಮುದ್ರಣಕ್ಕೆ ಸಿದ್ದಗೊಂಡಿದೆ. ಇವರು ಪ್ರಸ್ತುತ ಮಾಣಿಯಲ್ಲಿ ಸಂಸಾರ ಜೋಡುಮಾರ್ಗ ಕಚೇರಿಯನ್ನು ಮುನ್ನಡೆಸುತ್ತಿದ್ದಾರೆ.
Be the first to comment on "ಮತದಾರರ ಜಾಗೃತಿಗೆ ಓಟು ಹಾಕೋಣ ಬನ್ನಿ ಕೃತಿ, ಮತ ಮಾರಾಟಕ್ಕಲ್ಲ ಬೀದಿನಾಟಕ"