ಶನಿವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಂವಿಧಾನ ಉಳಿವಿಗಾಗಿ ಸ್ವಾಭಿಮಾನಿ ಸಮಾವೇಶ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಕಟುವಾಗಿ ಟೀಕಿಸಲು ವೇದಿಕೆಯಾಯಿತು.
ಗುಜರಾತ್ ಶಾಸಕ, ಪ್ರಧಾನಿಯ ಕಟುಟೀಕಾಕಾರ ಎಂದೇ ಹೇಳಲಾದ ಜಿಗ್ನೇಶ್ ಮೇವಾನಿ. ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಮತ್ತು ಅಲಹಾಬಾದ್ ನ ಹೋರಾಟಗಾರ್ತಿ ರಿಚಾ ಸಿಂಗ್ ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಲ್ಲದೆ, ಬಿಜೆಪಿಗೆ ಈ ಬಾರಿ ಮತದಾನ ಮಾಡಬೇಡಿ ಎಂಬ ಸಂದೇಶ ಸಾರಿದರು.
ಪ್ರಧಾನಿ ಕೊಟ್ಟ ಭರವಸೆ ಈಡೇರಿಸಿಲ್ಲ. ಬ್ಯಾಂಕ್ ಸಾಲ ಪಡೆದು ದೇಶಬಿಟ್ಟು ಹೋದವರನ್ನು ತಡೆಯಲಿಲ್ಲ. ಎಟ್ರಾಸಿಟಿ ಕಾನೂನು ಸಮರ್ಪಕವಾಗಿ ಜಾರಿಯಾಗಿಲ್ಲ. ಹೀಗೆ ಹಲವು ಅಂಶಗಳನ್ನು ಮುಂದಿಟ್ಟು ಟೀಕಾಪ್ರಹಾರ ಮಾಡಿದ ಜಿಗ್ನೇಶ್, ಬಿಜೆಪಿ ಗೆಲ್ಲದಂತೆ ಮಾಡುವುದೇ ತಮ್ಮ ಗುರಿ ಎಂದರು.
ಅಲಹಾಬಾದ್ ವಿದ್ಯಾರ್ಥಿ ನಾಯಕಿ ರಿಚಾ ಸಿಂಗ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯುವುದು ಇಂದಿನ ಅಗತ್ಯ ಎಂದರು.೧೫ ಲಕ್ಷ ಮಂದಿ ಮೊದಲ ಬಾರಿ ಮತದಾನ ಮಾಡುವ ಕರ್ನಾಟಕದ ಯುವಜನತೆ ಎಲ್ಲಕ್ಕಿಂತ ದೊಡ್ಡ ಭ್ರಷ್ಟಾಚಾರದ ಪಕ್ಷ ಬಿಜೆಪಿಯನ್ನು ಸೋಲಿಸಬೇಕು ಎಂದರು.
ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಮಿತಿಯ ರಾಜ್ಯ ಸಮಿತಿಯ ಮುಖಂಡ ಕೆ.ಎಲ್.ಅಶೋಕ್ ಮಾತನಾಡಿ, ಸಂವಿಧಾನ ಉಳಿಸುವ ಈ ಹಿನ್ನೆಲೆಯಲ್ಲಿ ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ ನೇತೃತ್ವದಲ್ಲಿ ಹಾಗೂ ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಅವರ ಮಾರ್ಗದರ್ಶನದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ರಚನೆಯಾಗಿದೆ ಎಂದರು.
ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ಬಿಜೆಪಿ ಸರಕಾರ ರಚಿಸೋದೇ ಇಲ್ಲ ಬೆದರು ಗೊಂಬೆಗಳ ತರಹ ಮಾತ್ರ ಬಿಜೆಪಿಯಿದೆ, ಬಿಜೆಪಿ ಪಕ್ಷಕ್ಕೆ ಸಿದ್ಧಾಂತ ಎಂಬುದೇ ಇಲ್ಲ ಅದು ಆರ್ ಎಸ್ಎಸ್ ಹೇಳಿದಂತೆ ಕೇಳುವ ಪಕ್ಷ ಎಂದು ರೈ ಹೇಳಿದರು.
ಡಿ.ಎಂ.ಕುಲಾಲ್, ಹಾಜಿ ಮುಸ್ತಫಾ ಕೆಂಪಿ, ನಿರ್ಮಲ್ ಕುಮಾರ್, ಆಲ್ವಿನ್ ಕುಲಾಸೊ, ಪತ್ರಕರ್ತ ಪುಷ್ಪರಾಜ್ ಶೆಟ್ಟಿ, ವಾಣಿ ಪೆರಿಯೋಡಿ ಮತ್ತಿತರರು ಉಪಸ್ಥಿತದ್ದರು. ರೆಡ್ ಅಲರ್ಟ್ ಕೃತಿ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸುರೇಶ್ ಭಟ್ ಬಾಕ್ರಬೈಲ್ ಅಧ್ಯಕ್ಷತೆ ವಹಿಸಿದ್ದರು ಉಮರ್ ಸ್ವಾಗತಿಸಿದರು. ಇಸ್ಮತ್ ಪಜೀರ್ ನಿರೂಪಿಸಿದರು.
Be the first to comment on "ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ"