ಬಿಜೆಪಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಯು.ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಏಪ್ರಿಲ್ 20ರಂದು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಕುರಿತು ಬಿ.ಸಿ.ರೋಡಿನ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, 20ರಂದು ಬೆಳಗ್ಗೆ 8 ಗಂಟೆಗೆ ಪೊಳಲಿ ಶ್ರೀರಾಜರಾಜೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಕಾಲ್ನಡಿಗೆ ಮೂಲಕ ಬಿ.ಸಿ.ರೋಡಿಗೆ ಆಗಮಿಸಲಿದ್ದಾರೆ. ಸ್ಪರ್ಶ ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕರ್ತರ ಸಭೆಯ ಬಳಿಕ ಬಿ.ಸಿ.ರೋಡಿನ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಯಕರ್ತರ ಸಭೆಯಲ್ಲಿ ಕ್ಷೇತ್ರದ ಪ್ರಮುಖ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈಗಾಗಲೇ ಪಕ್ಷದ ಪ್ರಚಾರ ಕಾರ್ಯಗಳು ನಡೆಯುತ್ತಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಪೇಜ್ ಪ್ರಮುಖರು ಮತದಾರರ ಸಂಪರ್ಕ ನಡೆಸುತ್ತಿದ್ದಾರೆ. ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು 2013ರಲ್ಲಿ ಸ್ಪರ್ಧಿಸಿ ಸೋಲನ್ನೇ ಸವಾಲಾಗಿ ಸ್ವೀಕರಿಸಿದ್ದು, ಸೋತ ಆರು ತಿಂಗಳಲ್ಲಿ ಕ್ಷೇತ್ರಾದ್ಯಂತ ಗ್ರಾಮಸಂಚಾರ ನಡೆಸಿ ಪಕ್ಷವನ್ನು ಸಂಘಟನಾತ್ಮಕವಾಗಿ ಬಲಗೊಳಿಸಿದ್ದಾರೆ ಎಂದ ಶೆಟ್ಟಿ, ಈ ಬಾರಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರದ ಜನವಿರೋಧಿ ನೀತಿ, ಉಸ್ತುವಾರಿ ಸಚಿವರ ದ್ವೇಷದ ರಾಜಕಾರಣ, ಶೂನ್ಯ ಸಾಧನೆ, ಹಿಂದು ದಮನಕಾರಿ ನೀತಿ ಚುನಾವಣೆಯ ಪ್ರಮುಖ ವಿಷಯಗಳಾಗಿವೆ. ಅಭಿವೃದ್ಧಿ ಅಂದರೆ ರಸ್ತೆ, ಚರಂಡಿ ನಿರ್ಮಿಸುವುದು ಮಾತ್ರವಲ್ಲ, ಜನರು ಶಾಂತಿ, ನೆಮ್ಮದಿಯಿಂದ ಜೀವಿಸುವಂತೆ ಮಾಡುವುದು ಮುಖ್ಯವಾಗಿದೆ. ಸಚಿವರು ಅದರಲ್ಲಿ ವಿಫಲರಾಗಿದ್ದಾರೆ ಎಂದರು.
ಕರೋಪಾಡಿ ಘಟನೆಗೆ ಖಂಡನೆ, ತನಿಖೆಗೆ ಒತ್ತಾಯ
ಕರೋಪಾಡಿ ಬೇಡಗುಡ್ಡೆಯಲ್ಲಿ ಕೊಳ್ನಾಡು ಶಕ್ತಿಕೇಂದ್ರದ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ ಮೇಲೆ ನಡೆಸಿದ ಹಲ್ಲೆಯನ್ನು ಬಿಜೆಪಿ ಖಂಡಿಸಿದೆ. ಕೇರಳ ಗಡಿಭಾಗದಲ್ಲಿ ಹಲ್ಲೆ, ಆಕ್ರಮಣಗಳು ನಡೆಯುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಕುರಿತು ತನಿಖೆ ಆಗಬೇಕು ಎಂದು ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ ಪ್ರಮುಖರಾದ ಮೋನಪ್ಪ ದೇವಸ್ಯ, ರಾಮದಾಸ ಬಂಟ್ವಾಳ, ಸುಲೋಚನಾ ಜಿ.ಕೆ.ಭಟ್, ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
Be the first to comment on "ಏ.20ರಂದು ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಾಮಪತ್ರ ಸಲ್ಲಿಕೆ, ಕಾರ್ಯಕರ್ತರ ಸಭೆ"