www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಸತತ ಏಳು ದಿನಗಳ ಬಳಿಕ ಬಿ.ಸಿ.ರೋಡಿನ ನಲ್ಲಿಯಲ್ಲಿ ನೀರು ಬರಲಾರಂಭಿಸಿದೆ. ಬೆವರು ಹರಿಸಿ ಕೆಲಸ ಮಾಡಿ, ಕೊಳವೆ ರಿಪೇರಿ ಮಾಡಿ ನೀರು ಹರಿಸಲು ಭಗೀರಥ ಯತ್ನವನ್ನೇ ಮಾಡಿದ ಕಾರ್ಮಿಕರಿಗೆ ಹ್ಯಾಟ್ಸಾಫ್ ಹೇಳಿರುವ ನಾಗರಿಕರು, ಒಂದು ವಾರ ನೀರಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗದಂತೆ ಮುಂಜಾಗರೂಕತಾ ಕ್ರಮವನ್ನೂ ಕೈಗೊಳ್ಳಬೇಕು ಎಂದು ಆಡಳಿತಕ್ಕೆ ಕಿವಿಮಾತು ಹೇಳಿದ್ದಾರೆ.
ಕೊಳವೆಯಲ್ಲಿ ಬಿರುಕು ಉಂಟಾಗಿ ಬಿ.ಸಿ.ರೋಡ್ ಪರಿಸರದಲ್ಲಿ ಕಳೆದ ಏಳು ದಿನಗಳಿಂದ ಉಂಟಾದ ನೀರಿನ ಸಮಸ್ಯೆಗೆ ಮುಕ್ತಿ ದೊರಕಿದೆ. ಫ್ಲೈಓವರ್ ಅಡಿಯಲ್ಲಿ ಇದ್ದ ಕೊಳವೆಯೊಂದರಲ್ಲಿ ಬಿರುಕು ಉಂಟಾಗಿದ್ದನ್ನು ಆರು ದಿನಗಳ ಸತತ ಹುಡುಕಾಟದ ಬಳಿಕ ಪತ್ತೆಹಚ್ಚಿನ ಪುರಸಭೆಯ ತಂಡ, ಅದನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಸಂಜೆ 5.45ಕ್ಕೆ ನೀರಿನ ಸ್ಥಾವರದಿಂದ ಕೊಳವೆಯಲ್ಲಿ ನೀರು ಹರಿಸುವ ಕಾರ್ಯವನ್ನು ನಡೆಸಿದೆ. ಸುಮಾರು 6.15ರ ವೇಳೆ ನಲ್ಲಿಯಲ್ಲಿ ನೀರು ಬಂದಿದೆ.
ಕಳೆದ ಶನಿವಾರದಿಂದ ನೀರಿನ ಸಮಸ್ಯೆ ತಲೆದೋರಿತ್ತು. ಶುಕ್ರವಾರ ಪೈಪು ಜೋಡಣೆಯ ಕಾರ್ಯಕ್ಕೆ ರಸ್ತೆ ಪಕ್ಕ ಅಗೆಯುವ ಕಾರ್ಯ ನಡೆಯಿತು. ನೀರಿನ ಹಳೇ ಪೈಪು ಎಲ್ಲೆಲ್ಲಿ ಹೋಗಿದೆ ಎಂಬ ಸ್ಪಷ್ಟತೆ ಇಲ್ಲದೆ ಪರದಾಡಿದ ಸಿಬ್ಬಂದಿ, ಶುಕ್ರವಾರ ಪೈಪುಗಳ ಜೋಡಣೆಗೆ ಹೊರಟರು. ಈ ಸಂದರ್ಭ ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲೇ ನೀರು ಚಿಮ್ಮಲು ಆರಂಭಿಸಿ ಹೊಳೆಯಂತೆ ಹರಿಯಿತು. ಒಂದು ಹಂತದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ರಸ್ತೆಯಲ್ಲಿ ಸಂಚರಿಸಲೂ ಆಗದಂಥ ಪರಿಸ್ಥಿತಿ ನಿರ್ಮಾಣಗೊಂಡಿತು. ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಹೊಳೆಯಂತೆ ನೀರು ತುಂಬಿತ್ತು. ಶುಕ್ರವಾರ ಸಂಜೆಯ ವೇಳೆಗೆ ಕೆಲಸ ಮುಗಿದಿತ್ತು.
NEWS RELATED TO THIS POST at www.bantwalnews.com :
Be the first to comment on "ಅಂತೂ, ಇಂತೂ ನೀರು ಬಂತು!!!"