ಕಳೆದ ನಾಲ್ಕು ದಿನಗಳಿಂದ ಬಿ.ಸಿ.ರೋಡ್ ಪೇಟೆ ಸಹಿತ ಸುತ್ತಮುತ್ತಲಿನ ನಿವಾಸಿಗಳು ಮತ್ತು ಅಂಗಡಿ ಮುಂಗಟ್ಟುಗಳು ನೀರಿಲ್ಲದೆ ಪರದಾಡುವಂತಾಗಿದೆ. ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಈ ಸಮಸ್ಯೆ ನಿರ್ಮಾಣವಾಗಿದೆ ಎನ್ನಲಾಗಿದ್ದು, ಮಂಗಳವಾರ ಸಂಜೆವರೆಗೂ ಪರಿಹಾರ ದೊರಕಿಲ್ಲ.
ಬಿ.ಸಿ.ರೋಡಿನ ಹೃದಯಭಾಗದಲ್ಲಿ ಪೈಪ್ ಒಡೆದಿದ್ದು, ಸುಮಾರು ಮೂರು ಕಡೆಗಳಲ್ಲಿ ಪೈಪ್ ಹಾನಿಯಿಂದಾಗಿ ಈ ಸಮಸ್ಯೆ ಉಂಟಾಗಿದೆ. ಈ ಪೈಕಿ ಎರಡೂ ಕಡೆ ಪೈಪ್ ಒಡೆದಿದ್ದು, ಅವನ್ನು ಪತ್ತೆಹಚ್ಚಲಾಗಿದೆ. ಮತ್ತೊಂದು ಜಾಗದ ಹುಡುಕಾಟ ನಡೆಯುತ್ತಿದ್ದು, ಇನ್ನೂ ಸಮಸ್ಯೆಗೆ ಮುಕ್ತಿ ದೊರಕಿಲ್ಲ.
ನೀರು ಸೋರುವಿಕೆಯನ್ನು ಪತ್ತೆಹಚ್ಚಲು ವಾಹನದಟ್ಟಣೆ ಸದಾ ಇರುವ ಸೋಮಯಾಜಿ ಆಸ್ಪತ್ರೆ ಎದುರು ಇರುವ ರಸ್ತೆಯ ಭಾಗವನ್ನೇ ಅಗೆಯಲಾಯಿತು. ಆದರೆ ಅಲ್ಲಿ ಸೋರಿಕೆ ಪತ್ತೆಹಚ್ಚಲಾಗದೆ ಪ್ರಯತ್ನ ನಿಷ್ಫಲವಾಯಿತು. ಮೂರು ದಿನಗಳ ಕಾಲ ನೀರಿನ ಅಭಾವ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದು, ಇದರಿಂದ ನೂರಾರು ಮನೆಗಳ ಜನರಿಗೆ ನೀರಿಲ್ಲದಂತಾಗಿದೆ. ಮುನ್ಸಿಪಾಲಿಟಿ ಕೊಳವೆಯಲ್ಲಿ ಸಮಸ್ಯೆ ಉಂಟಾಗಿದ್ದು, ನೀರು ಒದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕ.ನ.ನೀ.ಒ.ಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮೀ ತಿಳಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಬುಧವಾರ ಸಂಜೆ ನೀರು ಬರುವ ಸಾಧ್ಯತೆ ಇದೆ.
Be the first to comment on "ಬಿ.ಸಿ.ರೋಡಿನಲ್ಲಿ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲ"