www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮೂವರು ನಿವೃತ್ತ ಶಿಕ್ಷಕಿಯರನ್ನು ಬಂಟ್ವಾಳದ ಜೋಡುಮಾರ್ಗ ಉದ್ಯಾನವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರ ಶಿಷ್ಯವೃಂದದಿಂದ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕಿಯರಾದ ಕ್ಯಾಥರಿನ್ ಸ್ಟೆಲ್ಲಾ ಡೇಸಾ, ಮೀನಾಕ್ಷಿ, ಜೋಸ್ಫಿನ್ ಹೆಲೆನ್ ಫ್ರೇಂಕ್ ಅವರನ್ನು ಹಳೇ ವಿದ್ಯಾರ್ಥಿಗಳ ಪರವಾಗಿ ಅತಿಥಿಗಳು ಸನ್ಮಾನಿಸಿದರು.
ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಕಲಿತಿರುವ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಗಳಲ್ಲಿ ಅಲಂಕರಿಸಿರುವುದು ನಮಗೆ ಸಂತಸ ತಂದಿದೆ. ಕೃತಜ್ಞತೆ ಎನ್ನುವುದು ಮಾನವೀಯ ಮೌಲ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾರಿಗೂ ಕೂಡಾ ಕೃತಜ್ಞತೆ ತಿಳಿಸುವ ವ್ಯವಧಾನವೇ ಇಲ್ಲವಾಗಿದೆ. ಈ ಸಂದರ್ಭ ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದಿನ ಬ್ಯಾಚಿನ ವಿದ್ಯಾರ್ಥಿಗಳು ತಮ್ಮನ್ನು ವಿದ್ಯಾವಂತರನ್ನಾಗಿ ರೂಪಿಸಿದ ಶಿಕ್ಷಕಿಯರನ್ನು ಗೌರವಿಸುವುದು ಹೆಮ್ಮೆಯ ವಿಚಾರ ಎಂದರು.
ಮೊಡಂಕಾಪು ಇನ್ಫೆಂಟ್ ಜೀಸೆಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಡೆನಿಸ್ ತಾವ್ರೋ ಅಧ್ಯಕ್ಷತೆ ವಹಿಸಿದ್ದರು.
ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ಟಿ. ಸೇಸಪ್ಪ ಮೂಲ್ಯ, ಗೂಡಿನಬಳಿ ಹಯಾತುಲ್ ಇಸ್ಲಾಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಬಿ.ರಾಮಚಂದ್ರ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪುರಸಭಾ ಸದಸ್ಯೆ ಯಾಸ್ಮೀನ್ ಅಹ್ಮದ್, ಅಕ್ಬರ್ ಅಲಿ ಉಪಸ್ಥಿತರಿದ್ದರು.
ಪ್ರಜ್ಞಾ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಸ್ವಾಗತಿಸಿ, ಪ್ರಸ್ತಾವಿಸಿದರು. ಸವಿತಾ ಆಚಾರ್ಯ ವಂದಿಸಿದರು. ಲಿಂಗಪ್ಪ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ನಿವೃತ್ತ ಶಿಕ್ಷಕಿಯರನ್ನು ನೆನಪಿಸಿ ಸನ್ಮಾನಿಸಿದ ಹಳೇ ವಿದ್ಯಾರ್ಥಿಗಳು"