www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್ಸೊಂದು ಬಂಟ್ವಾಳ ತಾಲೂಕಿನ ಮಾಣಿ ರಾಷ್ಟ್ರೀಯ ಹೆದ್ದಾರಿ ಸಮೀಪ ಬುಧವಾರ ಸಂಜೆ ರಸ್ತೆ ಬದಿಗೆ ಉರುಳಿ ಮಹಿಳೆಯೊಬ್ಬರು ಮೃತಪಟ್ಟರೆ, ಬಸ್ ಕಂಡಕ್ಟರ್ ಸೇರಿ ಸುಮಾರು 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಉಪ್ಪಿನಂಗಡಿಯ ರಾಮನಗರ ನಿವಾಸಿ ಮಹೇಶ್ ಪ್ರಭು ಎಂಬವರ ಪತ್ನಿ ದಿವ್ಯಾ ಪ್ರಭು (40) ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟರೆ, ಮಹೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಹೇಶ್ ಅವರ ಅಣ್ಣನ ಮಗಳು ದೀಪ್ತಿ ಪ್ರಭು (11), ತಾಯಿ ರತ್ನಾ ಪ್ರಭು (71) ಮತ್ತು ಮಗ ಯಶಸ್ ಪ್ರಭು (8) ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲದೆ ಇನ್ನೂ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟು ಬಸ್ಸಿನಲ್ಲಿ ಸುಮಾರು 25 ಮಂದಿ ಪ್ರಯಾಣಿಕರು ಇದ್ದರು ಎಂದು ವಿಟ್ಲ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಬುಧವಾರ ಸಂಜೆ ಧಾರಾಕಾರ ಮಳೆ ಆರಂಭಗೊಳ್ಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬಸ್ ನಿರ್ವಹಕ ಪ್ರಭಾಕರ ಎಂಬವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್, ಮಾಣಿಯ ಕಾಲೇಜು ಸಮೀಪ ನಿಯಂತ್ರಣ ಕಳೆದು ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆದು ಉರುಳಿದೆ. ಘಟನೆ ನಡೆಯುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹೆದ್ದಾರಿ ಕಾಮಗಾರಿಯ ಹಿಟಾಚಿ ಮೂಲಕ ಬಸ್ಸನ್ನು ಮೇಲೆತ್ತಾಲಾಯಿತು. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೊಂದು ಅಪಘಾತದಲ್ಲಿ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಅಂಗರಗುಂಡಿ ಎಂಬಲ್ಲಿ ಬೈಕ್ ಸ್ಕಿಡ್ ಆಗಿದೆ. ಗ್ರಾಪಂ ಸಿಬ್ಬಂದಿ ಚೆಲುವಪ್ರಕಾಶ್ ಗಾಯಗೊಂಡಿದ್ದಾರೆ.
Be the first to comment on "ಮಾಣಿ ಹೆದ್ದಾರಿ ಪಕ್ಕ ಉರುಳಿದ ಸರ್ಕಾರಿ ಬಸ್: ಮಹಿಳೆ ಸಾವು"