ಬಿ.ಸಿ.ರೋಡಿನಲ್ಲಿ ಈಗಿರುವ ಖಾಸಗಿ ಬಸ್ ನಿಲ್ದಾಣ ಸರಿಯಾದ ಕ್ರಮದಲ್ಲಿ ಆಗಿಲ್ಲ. ಅದರಲ್ಲಿ ಬಸ್ ಗಳು ವ್ಯವಸ್ಥಿತವಾಗಿ ಬರಲು, ಹೋಗಲು ಅವಕಾಶವೇ ಇಲ್ಲ. ಹೀಗಾಗಿ ಜನರ ಮನಸ್ಸಿನ ಭಾವನೆಗೆ ಅನುಸಾರವಾಗಿ ಖಾಸಗಿ ಬಸ್ ನಿಲ್ದಾಣವನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬುಧವಾರ ಬಿ.ಸಿ.ರೋಡಿನ ತಾಪಂ ಹಳೇ ಕಟ್ಟಡ ಇದ್ದ ಜಾಗದಲ್ಲಿ ಪಿಪಿಪಿ ಮಾದರಿಯಲ್ಲಿ ತಾಲೂಕು ಪಂಚಾಯತ್ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ 20 ಕೋಟಿ ರೂ ವೆಚ್ಚದ ಬಸ್ ನಿಲ್ದಾಣ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಬಸ್ ನಿಲ್ದಾಣದ ಎರಡೂ ಬದಿಯಲ್ಲಿ ವಾಹನಗಳು ಬರಲು, ತೆರಳಲು ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಕೋರ್ಟು, ಮಿನಿ ವಿಧಾನಸೌಧ, ಪೊಲೀಸ್ ಸ್ಟೇಶನ್ ಸಹಿತ ನಾನಾ ಕಚೇರಿಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ. ಜಿಲ್ಲೆಯ ಇತರ ಭಾಗದ ಜನರಿಗೂ ಇದರಿಂದ ಲಾಭವಾಗಲಿದೆ ಎಂದು ಹೇಳಿದ ಸಚಿವರು, ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುವ ಬಸ್ ನಿಲ್ದಾಣವನ್ನು ಪುತ್ತೂರು ಬಸ್ ನಿಲ್ದಾಣ ಮಾದರಿಯಲ್ಲಿ ಕಟ್ಟಲಾಗುವುದು. ಇದರಿಂದ ತಾಪಂಗೂ ಅನುಕೂಲ ಎಂದರು.
ಅಭಿವೃದ್ಧಿ ಕಾರ್ಯ:
ಬಿ.ಸಿ.ರೋಡಿಗೆ ಅಗತ್ಯ ಇರುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ತಾನು ನಡೆಸಿದ್ದೇನೆ. ಮಾ.೧ ರಂದು 10ಕೋಟಿ ರೂ ವೆಚ್ಚದಲ್ಲಿ ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಹೇಳಿದ ಸಚಿವರು, ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ನೀಡಿದರು.
ಸಾಧನೆ ಗಮನಿಸಿ: ಖಾದರ್
ಸಚಿವ ರೈ ತಮ್ಮ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದು, ಇದನ್ನು ಗಮನಿಸಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಮುಂದಿನ ಚುನಾವಣೆಯಲ್ಲಿಯೂ ಸಚಿವ ರೈ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಕಮಲಾಕ್ಷಿ ಕೆ.ಪೂಜಾರಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ತಾಪಂ ಸದಸ್ಯ ಸಂಜೀವ ಪೂಜಾರಿ ಉಪಸ್ಥಿತರಿದ್ದರು. ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ವಂದಿಸಿದರು.
Be the first to comment on "ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಖಾಸಗಿ ಬಸ್ ನಿಲ್ದಾಣ: ರೈ"