ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚುವರಿಯಾಗಿ ಒಟ್ಟು ರೂ.35 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನ 14.5 ಕೋಟಿ ರೂ, ಅಲ್ಪಸಂಖ್ಯಾತರ ಕಾಲನಿ ಸಂಪರ್ಕ ರಸ್ತೆಗಳಿಗೆ 7 ಕೋಟಿ ರೂ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 7 ಕೋಟಿ, ಶಾಲಾ ಕೊಠಡಿ ನಿರ್ಮಾಣಕ್ಕೆ 43.9 ಲಕ್ಷ ರೂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲನಿ ಸಂಪರ್ಕಿಸುವ ರಸ್ತೆಗಳಿಗೆ 4 ಕೋಟಿ ರೂ ಇದರಲ್ಲಿ ಸೇರಿವೆ ಎಂದರು.
ನಗರೋತ್ಥಾನ 3ನೇ ಹಂತದಲ್ಲಿ ಬಂಟ್ವಾಳ ಪುರಸಭೆಗೆ ೨ ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ೧೬ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಸರಳ ವಿಧಾನವಾದ ಪೈರೋಲಿಸಿಸ್ ಯಂತ್ರಕ್ಕೆ ೧ ಕೋಟಿ ರೂ. ನೀಡಿದ್ದು, ಇದನ್ನು ಕಂಚಿನಡ್ಕ ಪದವಿನಲ್ಲಿ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ ರೈ, ಕ್ಷೇತ್ರಕ್ಕೆ ನನ್ನ ಜವಾಬ್ದಾರಿಯ ಕೆಲಸಗಳನ್ನು ಪೂರೈಸಿದ್ದಾಗಿ ಹೇಳಿದರು.
ಅಗರಗಂಡಿ – ಹೆಗ್ಗಣಗುಳಿ – ನೆಕ್ಕಿಲಪಲ್ಕೆ – ಉಳಿ ರಸ್ತೆ ಅಭಿವೃದ್ಧಿ ಗೆ ೨ ಕೋಟಿ ರೂ, ಕನ್ಯಾನ – ಬೊಲ್ಪಾದೆ ರಸ್ತೆ ಅಭಿವೃದ್ಧಿಗೆ ೨ ಕೋಟಿ ರೂ, ಖಂಡಿಗಕ್ರಾಸ್ – ಸೆರ್ಕಳ – ಮದಕ – ಕುಡ್ತಮುಗೇರು ರಸ್ತೆ ಅಭಿವೃದ್ಧಿ ಗೆ ೨ ಕೋಟಿ ರೂ, ಕಾರಾಜೆ – ಕುಚ್ಚುಗುಡ್ಡೆ – ಮಿತ್ತಮಜಲು ಕಾಂತಾಡಿ -ಕೂಡೂರು – ಕೊಳಕೆ ರಸ್ತೆ ಅಭಿವೃದ್ಧಿಗೆ ೨.೫ ಕೋಟಿ ರೂ, ಹಳೆಗೇಟು – ಕನಪಾದೆ – ಅಲ್ಲಿಪಾದೆ ರಸ್ತೆ ಅಭಿವೃದ್ಧಿಗೆ ೨.೫ ಕೋಟಿ ರು, ಪೆರುವಾರು – ಕಲ್ಪನೆ – ಬಡಗಬೆಳ್ಳೂರು – ಕಿರಾಲೆ – ಎರ್ಮಾಳ ರಸ್ತೆ ಅಭಿವೃದ್ಧಿಗೆ ೨ ಕೋಟಿ ರೂ, ದೇವರಗುಡ್ಡೆ – ಕಲ್ಕುಟ – ಪೊಳಲಿ ರಸ್ತೆ ಅಭಿವೃದ್ಧಿ ೧.೫೦ ಕೋಟಿ ರೂ ಸೇರಿ ೧೪.೫ ಕೋಟಿ ರೂಗಳ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಮೊದಲಾದ ಅಲ್ಪಸಂಖ್ಯಾತರ ಕಾಲನಿಗಳಿರುವ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ೪ ಹಂತಗಳಲ್ಲಿ ರೂ.೭ ಕೋಟಿ ಅನುದಾನ ಬಿಡುಗಡೆಯಾಗಿದೆ. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ರೂ.೧.೫೦ ಕೋಟಿ ವೆಚ್ಚದಲ್ಲಿ ಒಟ್ಟು 12 ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಾಂತರ ಪ್ರದೇಶಕ್ಕೆ ಬಿಡುಗಡೆಯಾದ ೬ ಕೋಟಿ ಅನುದಾನದಲ್ಲಿ ಒಟ್ಟು ೮೬ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ರೈ ಹೇಳಿದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ರೂ.7 ಕೋಟಿ ಅನುದಾನ:
ಗ್ರಾಮೀಣ ಭಾಗದಲ್ಲಿ ಈಗ ಇರುವ ರಸ್ತೆಗಳ ದುರಸ್ತಿ ಅಭಿವೃದ್ಧಿ ಇತ್ಯಾದಿಗಳಿಗಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಒಟ್ಟು ರೂ.೭ ಕೋಟಿ ಅನುಷ್ಠಾನಕ್ಕೆ ಅನುಮೋದನೆ ನೀಡಿದ್ದು ಕಾಮಗಾರಿಗಳು ಆರಂಭಗೊಂಡಿವೆ. ಬಹಳ ಕಾಲಗಳಿಂದ ಸುಧಾರಣೆಯಾಗದ ರಸ್ತೆಗಳನ್ನು ಗುರುತಿಸಿ ಅವುಗಳ ದುರಸ್ತಿ ಮರು ಡಾಮರೀಕರಣ ಇತ್ಯಾದಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ ರೈ, ೨೦೧೭-೧೮ನೇ ಸಾಲಿಗೆ ಸರ್ಕಾರಿ ಪ್ರೌಢಶಾಲೆಗಳ ಭೋದನಾ ಕೊಠಡಿಗಳ ನಿರ್ಮಾಣಕ್ಕಾಗಿ ಜಿಲ್ಲೆಗೆ ಒಟ್ಟು ೧೩೨.೫೦ ಲಕ್ಷ ಅನುದಾನ ಬಿಡುಗಡೆಯಾಗಿದೆ. ಬಂಟ್ವಾಳ ಕ್ಷೇತ್ರದ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿಗೆ ರೂ.೨೬.೫೦ ಲಕ್ಷ ನಿಗದಿಪಡಿಸಲಾಗಿದ್ದು ಶೀಘ್ರವಾಗಿ ಕಾಮಗಾರಿ ಆರಂಭಗೊಳ್ಳಲಿದೆ. ಕೊಡಂಗಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ರೂ ೮.೭೦ ಲಕ್ಷ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ ಇಲ್ಲಿ ಕೊಠಡಿ ನಿರ್ಮಾಣಕ್ಕೆ ರೂ ೮.೭೦ ಅನುದಾನ ಬಿಡುಗಡೆಗೊಂಡಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲನಿ ಸಂಪರ್ಕಿಸುವ ರಸ್ತೆಗಳಿಗೆ ೪ ಕೋಟಿ ಬಿಡುಗಡೆ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿಗೆ ಸಂಬಂಧಪಟ್ಟ ೯ ರಸ್ತೆಗಳ ಕಾಂಕ್ರೀಟೀಕರಣಕ್ಕೆ ರೂ. ೨ ಕೋಟಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸಂಬಂಧಪಟ್ಟ ೯ ರಸ್ತೆಗಳ ಕಾಂಕ್ರೀಟೀಕರಣಕ್ಕೆ ರೂ.೨ ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಶೀಘ್ರವೇ ಕಾಮಗಾರಿ ಅನುಷ್ಠಾನಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಕಾಂಗ್ರೆಸ್ ಮುಖಂಡ ಜನಾರ್ದನ ಚಂಡ್ತಿಮಾರ್ ಇದ್ದರು.
Be the first to comment on "ಬಂಟ್ವಾಳ ಕ್ಷೇತ್ರ ಅಭಿವೃದ್ಧಿಗೆ ಮತ್ತೆ 35 ಕೋಟಿ ರೂ. ಅನುದಾನ ಬಿಡುಗಡೆ: ರಮಾನಾಥ ರೈ"