ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮೊದಲ ಹಂತದಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ವಿತರಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳ ಪುರಸಭೆ ಆವರಣದಲ್ಲಿ ಶನಿವಾರ ಸಂಜೆ ಪುರಸಭಾ ಕಚೇರಿ ಆವರಣದಲ್ಲಿ ಶೇ.7.25 ರ ಯೋಜನೆಯಡಿ ಬಂಟ್ವಾಳ ಪುರಸಭಾ ವ್ಯಾಪ್ತಿಯ 10ನೇ ತರಗತಿಗಿಂತ ಮೇಲ್ಪಟ್ಟ ತರಗತಿಗಳಲ್ಲಿ ಕಲಿಯುತ್ತಿರುವ 323 ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಚೆಕ್ ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತಾಪಿಸಿದ ಅವರು, ಐಟಿಐ ಕಾಲೇಜು ಮಂಜೂರಾಗಿದ್ದು, ಕಾವಳಕಟ್ಟೆಯಲ್ಲಿ ಆರಂಭವಾಗಲಿದೆ ಎಂದರು. ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್ ಸರ್ಕಲ್ ನಿಂದ ಜಕ್ರಿಬೆಟ್ಟುವರೆಗೆ ಕಾಂಕ್ರೀಟ್ ಮತ್ತು ಅಲ್ಲಿಂದ ತಾಲೂಕಿನ ಗಡಿ ಭಾಗವಾದ ಪುಂಜಾಲಕಟ್ಟೆವರೆಗೆ ೧೨೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದ ರೈ, ಕೆಲವೇ ದಿನಗಳಲ್ಲಿ ಆರ್.ಟಿ.ಒ. ಕಚೇರಿ ಬಂಟ್ವಾಳ ವ್ಯಾಪ್ತಿಯಲ್ಲಿ ಕಾರ್ಯಾರಂಭಗೊಳಿಸಲಿದೆ ಎಂದರು.
ಸಮುದಾಯ ಆಸ್ಪತ್ರೆಯ ಕಾಮಗಾರಿ ಈ ಹಿಂದೆ ಆರಂಭಗೊಂಡಿದ್ದರೂ ಬಳಿಕ ನೆನೆಗುದಿಗೆ ಬಿದ್ದಿತ್ತು, ಅದನ್ನು ಸೂಕ್ತ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಿ ಸುಸಜ್ಜಿತ ಆಸ್ಪತ್ರೆಯಾಗಿ ಜನರ ಉಪಯೋಗಕ್ಕೆ ಒದಗಿದೆ. ಕೇವಲ ಗ್ರಾಮೀಣ ಮಾತ್ರವಲ್ಲ, ನಗರ ಪ್ರದೇಶದ ಅಭಿವೃದ್ಧಿಗೂ ಒತ್ತು ನೀಡಲಾಗಿದೆ ಎಂದರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಸಚಿವ ರಮಾನಾಥ ರೈ ಯವರು ಕೋಟ್ಯಾಂತರ ರೂ ಅನುದಾನ ಒದಗಿಸಿದ್ದು, ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಪಲ್ಲಮಜಲು, ಬೋಳಂಗಡಿ ಪರಿಸರದಲ್ಲಿ ಜಮೀನು ಗುರುತಿಸಲಾಗಿದೆ. ತಿಂಗಳೊಳಗಾಗಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು. ಫೆ.೭ರಂದು ಬಂಟ್ವಾಳ ಕಸಬಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು. ಪುರಸಭೆಯ ೨೩ ವಾರ್ಡುಗಳ ಅಭಿವೃದ್ಧಿಗೂ ಸಮಾನ ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ವಾಸುಪೂಜಾರಿ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಜಿ.ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ವೇದಿಕೆಯಲ್ಲಿದ್ದರು. ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಸ್ವಾಗತಿಸಿದರು. ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯ ಅಭಿವೃದ್ಧಿ ಸಂಘಟಕ ಮತ್ತಡಿ ವಂದಿಸಿದರು. 323 ವಿದ್ಯಾರ್ಥಿಗಳಿಗೆ ಒಟ್ಟು 3.25 ಲಕ್ಷ ರೂ ವಿದ್ಯಾರ್ಥಿವೇತನ ವಿತರಿಸಲಾಯಿತು.
Be the first to comment on "ಬಂಟ್ವಾಳ : 323 ಮಕ್ಕಳಿಗೆ ಪ್ರೋತ್ಸಾಹಧನ ವಿತರಣೆ"