ಕಠೋಪನಿಷತ್ತಿನ ತಿರುಳು, ಕ್ಯಾನ್ಸರ್ ಎದುರಿಸುವ ತಯಾರಿ

  • ಹಂಸಗೀತೆ ಯಲ್ಲಿ ಬಂಟ್ವಾಳದ ಜಬ್ಬಾರ್ ಪೊನ್ನೋಡಿ
  • ಯೋಗೀಶ್ ಮಾಸ್ಟರ್ ಕಾದಂಬರಿ, ಅವರದ್ದೇ ಸಿನಿಮಾ

ನನಗೆ 11 ವರ್ಷಗಳ ಕ್ಯಾನ್ಸರ್ ಅನುಭವ ಇದೆ. ಮನೆಯ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ತಟ್ಟಿದರೆ, ಆತ, ಆಕೆಯ ಇಡೀ ಬಳಗವೇ ಅದರ ಪರಿಣಾಮ ಅನುಭವಿಸುತ್ತದೆ. ಒಬ್ಬ ಕ್ಯಾನ್ಸರ್ ಉಳ್ಳವನನ್ನು ಯಾವ ರೀತಿ ನೋಡಿಕೊಳ್ಳಬಹುದು ಎಂಬುದನ್ನು ಜಗತ್ತಿಗೆ ತಿಳಿಸುವ ಉದ್ದೇಶ, ಜಾಗೃತಿ ಮೂಡಿಸುವ ಅನುಭವ ಹಂಸಗೀತೆಯಲ್ಲಿದೆ. ಹೀಗಾಗಿ ನಾನು ಅದರಲ್ಲಿ ಅಭಿನಯಿಸಿದ್ದೇನೆ.
ಹೀಗಂದರು ಬಂಟ್ವಾಳದ ಜಬ್ಬಾರ್ ಪೊನ್ನೋಡಿ.


ಇಂದು ಕ್ಯಾನ್ಸರ್ ಗೆ ನಿಕಟವಾಗಿರುವವರು ಪೀಡಿತರಲ್ಲದೆ ಅವರ ಬಂಧು, ಬಳಗ, ಸ್ನೇಹಿತವರ್ಗ. ಅವರಿಗೆ ಮಾನಸಿಕವಾಗಿ ಭಾವನಾತ್ಮಕವಾಗಿ ಬೆಂಬಲ ನೀಡುವುದರ ಜೊತೆಗೆ ಧೈರ್ಯ, ಸ್ಥೈರ್ಯ ಒದಗಿಸಿಕೊಡುವುದು, ಏಕತಾನತೆಯ ಬಂಧದಿಂದ ಬಿಡಿಸಿ, ಸಮಾಜದ ಜೊತೆ ಒಡನಾಟ ಬೆಳೆಸುವಂತೆ ಮಾಡುವುದು ಕಲೆ, ಕಲಾವಿದರ ಜವಾಬ್ದಾರಿಯೂ ಹೌದು. ಈ ನಿಟ್ಟಿನಲ್ಲಿ ನನ್ನದೇ ಕಾದಂಬರಿ ಅಮೃತವನ್ನು ಚಲನಚಿತ್ರವನ್ನಾಗಿಸುತ್ತಿದ್ದೇನೆ. ಹೆಸರು ಹಂಸಗೀತ. ಇದೊಂದು ಅನುಭವಕೇಂದ್ರಿತ ಕಥನವೂ ಹೌದು, ಕೌನ್ಸಿಲಿಂಗ್ ರೀತಿಯಲ್ಲಿ ಕೆಲಸ ಮಾಡುವ ಮಾಧ್ಯಮವೂ ಹೌದು. ಹೀಗಾಗಿ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ.
ಹೀಗನ್ನುತ್ತಾರೆ ಕಾದಂಬರಿಕಾರ, ಚಿತ್ರ ನಿರ್ದೇಶಕ ಯೋಗೇಶ್ ಮಾಸ್ಟರ್.


ನಾನಾ ಕಾರಣಗಳಿಂದ ಇಂದು ಸಮಾಜದ ಯೋಚನಾ ಲಹರಿಯೇ ಬದಲಾಗುತ್ತಿದೆ. ಅಗತ್ಯವಿರುವ ವಿಚಾರಗಳ ಕಡೆಗೆ ಗಮನ ಹರಿಯುತ್ತಿಲ್ಲವೋ ಎಂಬ ಪ್ರಜ್ಞಾವಂತರ ಯೋಚನೆಗಳಿಗೆ ಇಂಬು ನೀಡುವ ಘಟನೆಗಳು ಒಂದೆಡೆ ನಡೆಯುತ್ತಿದ್ದರೆ, ಯೋಗೇಶ್ ಮಾಸ್ಟರ್ ಅವರು ಕ್ಯಾನ್ಸರ್ ನಂಥ ಮನುಷ್ಯನನ್ನು ಕಾಡುವ ಸಮಸ್ಯೆಗಳನ್ನು ಎದುರಿಸುವ ವಿಷಯವನ್ನು ಇಟ್ಟುಕೊಂಡು ಚಲನಚಿತ್ರ ಮಾಡುತ್ತಿದ್ದಾರೆ. ಅವರಿಗೆ ಪಾತ್ರಧಾರಿಯಾಗಿ ಸಾಥ್ ನೀಡಿದವರು ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಜಬ್ಬಾರ್ ಪೊನ್ನೋಡಿ.

ಜಬ್ಬಾರ್ ಜೀವನೋತ್ಸಾಹ:
ಸ್ವತ: ಅವರಿಗೇ ಕ್ಯಾನ್ಸರ್ ಕಾಡುತ್ತಿದ್ದರೂ ಜಬ್ಬಾರ್ ಸಿಂಪತಿ ಬಯಸಲಿಲ್ಲ. ಯಾವುದೇ ವಿನಾಯತಿಯನ್ನೂ ತೆಗೆದುಕೊಳ್ಳಲಿಲ್ಲ. ಪ್ರಖರ ಬಿಸಿಲಿದ್ದರೂ ಲೆಕ್ಕಿಸದೆ ಎಲ್ಲರೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅವರ ಜೀವನಪ್ರೀತಿ ಇತರರಿಗೆ ಮಾದರಿ ಕ್ಯಾನ್ಸರ್ ದೇಹಕ್ಕಾಗಿರಬಹುದು, ಮನಸ್ಸಿಗಲ್ಲ ಎಂಬ ಧೋರಣೆ ಜಬ್ಬಾರ್ ಅವರದ್ದು. ಇವರ ಅದಮ್ಯ ಜೀವನಪ್ರೀತಿ, ಉತ್ಸಾಹವನ್ನು ಮೆಚ್ಚಿಕೊಂಡರು ಯೋಗೇಶ್ ಮಾಸ್ಟರ್.

ಕಠೋಪನಿಷತ್ತು:
ಕಠೋಪನಿಷತ್ತಿನಲ್ಲಿ ನಚಿಕೇತ ಮತ್ತು ಯಮನ ನಡುವೆ ಸಂವಾದ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನಪೂರ್ಣ ವಿಚಾರ. ಇದನ್ನು ಹಂಸಗೀತೆಯಲ್ಲಿ ಅಳವಡಿಸಿಕೊಂಡಿದ್ದೇನೆ ಎನ್ನುವ ಮಾಸ್ಟರ್, ಹಿಂದೆ ಕ್ಷಮೆ ಇರಲಿ ಎಂಬ ಚಿತ್ರವನ್ನು ಈಶೋಪನಿಷತ್ತಿನ ಹಿನ್ನೆಲೆಯಾಗಿಟ್ಟು ಮಾಡಿದ್ದೆ ಎಂದರು. ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ, ಉಪ್ಪಿನಂಗಡಿ ಮೊದಲಾದೆಡೆ ಶೂಟಿಂಗ್ ನಡೆದಿದೆ.
ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ
ಹಂಸಗೀತೆಯನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡುವ ಇರಾದೆ ಯೋಗೀಶ್ ಮಾಸ್ಟರ್ ಅವರಿಗಿದೆ. ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ನಿರ್ಮಾಣವಾದ ಕಾರಣ, ವ್ಯಾಪ್ತಿ ಜಗದಗಲ. ತನ್ನ ಸಂಬಂಯೊಬ್ಬರಿಗೆ ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್ ಇದ್ದದ್ದು ಹಾಗೂ ನಿಕಟವರ್ತಿಗಳು ಕ್ಯಾನ್ಸರ್ ಬಗ್ಗೆ ಅನುಭವ ಹೇಳಿಕೊಂಡದ್ದು, ಅಮೃತ ಕಾದಂಬರಿಗೆ ಸೂರ್ತಿಯಾಯಿತು. ಅದನ್ನೇ ಚಿತ್ರವನ್ನಾಗಿಸಲು ಮನಸ್ಸು ಮಾಡಿದೆ. ಎಷ್ಟೋ ಕತೆಗಳು ಕೌನ್ಸೆಲಿಂಗ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ಜನಸಮೂಹ ತಲುಪಬೇಕಾದ ಕಾರಣ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.

ತಾರಾಗಣ:
ಅಬ್ದುಲ್ ಜಬ್ಬಾರ್ ಪೊನ್ನೋಡಿ, ಮಂಜುಳಾ, ಶಂಕರ್ ಬಹದ್ದೂರ್, ದೇವಿ, ಕೈವಲ್ಯ ಪಾತ್ರ ನಿರ್ವಹಿಸುತ್ತಿರುವ ಚಿತ್ರಕ್ಕೆ ಕಿರಣ್ ಶಂಕರ್ ಸಂಗೀತ, ಶಿವಶಂಕರ್ ಕ್ಯಾಮರಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

About the Author

Harish Mambady
ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Be the first to comment on "ಕಠೋಪನಿಷತ್ತಿನ ತಿರುಳು, ಕ್ಯಾನ್ಸರ್ ಎದುರಿಸುವ ತಯಾರಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*