ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ಶನಿವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯಕ್ ರಾಯಿ ಅವರ ಸಾಧನ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು, ಬಳಿಕ ಅವರನ್ನು ಸನ್ಮಾನಿಸಿ ಮಾತನಾಡಿ, ಮಕ್ಕಳೊಂದಿಗೆ ಮಕ್ಕಳಾಗಿ, ಹಿರಿಯರೊಂದಿಗೆ ಹಿರಿಯರಾಗಿ ಬೆರೆಯುವ ವ್ಯಕ್ತಿತ್ವದ ರಮೇಶ್ ನಾಯಕ್ ಅವರು ತಾನು ಕರ್ತವ್ಯ ನಿರ್ವಹಿಸಿದ ಶಾಲೆಯಲ್ಲಿ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆ ಪಡೆದುಕೊಂಡಿದ್ದಾರೆ ಎಂದು ಹೇಳಿದ ರೈ, ಅವರ ಶ್ರದ್ಧೆ, ಪರಿಶ್ರಮವೇ ಇದಕ್ಕೆ ಕಾರಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರಮೇಶ್ ನಾಯಕ್ ಅವರ ಶಿಕ್ಷಕ ಚಂದ್ರಶೇಖರ ಭಟ್ ಅವರಿಗೆ ಗುರುವಂದನೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ರಮೇಶ್ ನಾಯಕ್ ಅವರು ಮಾತನಾಡಿ ವೃತ್ತಿ ಜೀವನದಲ್ಲಿ ಜನರ ಪ್ರೀತಿ, ವಿಶ್ವಾಸ, ಆತ್ಮೀಯತೆಯನ್ನು ಗಳಿಸಿಕೊಂಡಿದ್ದೇನೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನೋರ್ವ ನಿವೃತ್ತಿ ಹೊಂದಿದಾಗ ಅದ್ದೂರಿ ಕಾರ್ಯಕ್ರಮ ಮಾಡಿ ಗೌರವಿಸಿರುವುದು ಬಂಟ್ವಾಳದ ಇತಿಹಾಸದಲ್ಲಿಯೇ ಇದು ಮೊದಲು ಎಂದರು . ನಾನು ಈ ಎತ್ತರಕ್ಕೆ ಏರಬೇಕಾದರೆ ಅದು ನನ್ನೊಬ್ಬನ ಸಾಧನೆ ಮಾತ್ರವಲ್ಲ, ಎಲ್ಲರ ಸಹಕಾರದಿಂದ ಸಾಕಾರವಾಗಿದೆ ಎಂದರು. ಎಂದೂ ಪ್ರಶಸ್ತಿಯನ್ನು ಬಯಸಿದವನಲ್ಲ, ಅದಕ್ಕಾಗಿ ಜನಪ್ರತಿನಿಧಿಗಳ ಹಿಂದೆ ಹೋದವನೂ ಅಲ್ಲ ಎಂದ ಅವರು, ತನಗೆ ರಾಷ್ಟ್ರಪ್ರಶಸ್ತಿ ದೊರಕಿದ ಬಳಿಕವಷ್ಟೇ ಸಚಿವ ರೈ ಅವರಿಗೆ ಮಾಹಿತಿ ಲಭಿಸಿದ್ದನ್ನು ಜ್ಞಾಪಿಸಿದರು.
ದ.ಕ.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ರಮೇಶ್ ನಾಯಕ್ ಮತ್ತು ರಾಯಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ರಮೇಶ್ ನಾಯಕ್ ಮತ್ತು ಸಾಮಾಜಿಕ ಜೀವನ ಕುರಿತು ವಿಷಯ ಮಂಡಿಸಿದರು.
ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ ಶೆಟ್ಟಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ರಾವ್, ಸಾಧನ ಸಂಭ್ರಮ ಸಮಿತಿಯ ಟಿ.ಶೇಷಪ್ಪ ಮೂಲ್ಯ ವೇದಿಕೆಯಲ್ಲಿದ್ದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಾಧಕ ಶಿಕ್ಷಕ ರಮೇಶ್ ನಾಯಕ್ ಸಾಧನೆಗೆ ಅಭಿಮಾನಿಗಳ ಗೌರವ"