ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಂಪರ್ಕ ಇಲ್ಲದಿರುವ 49618 ಫಲಾನುಭವಿಗಳಿಗೆ ಉಚಿತವಾಗಿ ಸಂಪರ್ಕ ನೀಡಲಾಗುವುದು ಎಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈಗಾಗಲೇ ಗ್ಯಾಸ್ ಸಂಪರ್ಕ ಪಡೆದಿರುವ ಮನೆಗಳನ್ನು ಹೊರತುಪಡಿಸಿ, ಇನ್ನೂ 49618 ಮನೆಗಳಿಗೆ ಗ್ಯಾಸ್ ಸಂಪರ್ಕ ಪಡೆಯಲು ಬಾಕಿ ಇದೆ. ಈಗಾಗಲೇ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಪಡೆಯಲಾಗಿದೆ. ಜಿಲ್ಲೆಯ ಎಲ್ಲಾ 8 ವಿಧಾನಸಭಾ ಕ್ಷೇತ್ರದ 320 ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಈ ಫಲಾನುಭವಿಗಳಿದ್ದು, ಮೊದಲ ಹಂತದಲ್ಲಿ 15858 ಫಲಾನುಭವಿಗಳಿಗೆ ಶೀಘ್ರವೇ ಗ್ಯಾಸ್ ಸಂಪರ್ಕ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್ ಸ್ಟವ್ ಕೂಡ ಉಚಿತವಾಗಿ ನೀಡಲಾಗುವುದು. ಸಿಲಿಂಡರ್ ಭದ್ರತಾ ಠೇವಣಿ- ರೂ. 1450, ರೆಗ್ಯುಲೇಟರ್- ರೂ.150, ಸುರಕ್ಷಾ ಹೋಸ್-ರೂ.190, ಪುಸ್ತಕ- ರೂ.50, ಜೋಡಣಾ ವೆಚ್ಚ- ರೂ. 100, ಎರಡು ಬರ್ನರ್ ಗ್ಯಾಸ್ ಸ್ಟವ್- ರೂ.1000 ಹಾಗೂ ಎರಡು ಭರ್ತಿಗೊಂಡ ಗ್ಯಾಸ್ ಸಿಲಿಂಡರ್- ರೂ. 1000 ಸೇರಿದಂತೆ ಪ್ರತೀ ಫಲಾನುಭವಿಗೆ ರಾಜ್ಯ ಸರಕಾರ ಒಟ್ಟು ರೂ. 4040 ವೆಚ್ಚ ಮಾಡಲಿದೆ. ಫಲಾನುಭವಿಗಳಿಗೆ ಇದು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅರಣ್ಯ ಇಲಾಖೆ, ಆಹಾರ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.
ಮುಖ್ಯಮಂತ್ರಿ ಅನಿಲಭಾಗ್ಯ ಅನುಷ್ಠಾನಕ್ಕೆ 41.12 ಲಕ್ಷ ಬಿಡುಗಡೆಯಾಗಿದೆ. ಮಾರ್ಚ್ ಅಂತ್ಯದೊಳಗೆ ವೆಚ್ಚ ಮಾಡಲಾಗುವುದು. ಅರ್ಹ ಫಲಾನುಭವಿಗಳು ಯೋಜನೆಯಲ್ಲಿ ವಂಚಿತರಾಗದಂತೆ ಆಹಾರ ಇಲಾಖೆ ಗಮನ ಹರಿಸಬೇಕು. ಇನ್ನೊಮ್ಮೆ ಫಲಾನುಭವಿಗಳ ಸಮರ್ಪಕ ಮಾಹಿತಿ ಪಡೆಯಬೇಕು. ಈಗಾಗಲೇ ಬೇರೆ ಇಲಾಖೆಯಿಂದ ಉಚಿತ ಗ್ಯಾಸ್ ಸಂಪರ್ಕ ಪಡೆದಿದ್ದರೆ, ಅವರಿಗೆ ಈ ಯೋಜನೆಯಲ್ಲಿ ಪುನರಾವರ್ತನೆಯಾಗದಂತೆ ಗಮನ ಹರಿಸಲು ಸಚಿವರು ಸೂಚಿಸಿದರು. ಅರ್ಹ ಫಲಾನುಭವಿಗಳು ಕಣ್ತಪ್ಪಿನಿಂದ ಕೈಬಿಟ್ಟು ಹೋಗಿದ್ದರೆ ಮುಂದಿನ ಹಂತದಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಸಿಕುಮಾರ್ ಸೆಂಥಿಲ್, ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ, ತೈಲ ಕಂಪೆನಿಗಳ ಅಧಿಕಾರಿಗಳು ಇದ್ದರು.
Be the first to comment on "ಮುಖ್ಯಮಂತ್ರಿ ಅನಿಲ ಭಾಗ್ಯ: ಜಿಲ್ಲೆಯಲ್ಲಿ 49618 ಮನೆಗೆ ಉಚಿತ ಗ್ಯಾಸ್ ಸಂಪರ್ಕ"