ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯವಾದ ಬೆಳವಣಿಗೆಯಾಗಬೇಕಾದರೆ ಮೊದಲು ಶೈಕ್ಷಣಿಕವಾಗಿ ಬೆಳವಣಿಗೆಯಾಗಬೇಕು. ರಾಷ್ಟ್ರದ ಪ್ರಗತಿಯ ಹಿಂದೆ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರೂ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹೇಳಿದರು.
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವದ ಐದನೇ ದಿನವಾದ ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಇಂದು ಎಲ್ಲರೂ ಎಲ್ಲರಿಗೂ ಶಿಕ್ಷಣ ನೀಡಬೇಕಾಗಿದೆ. ಇದರಲ್ಲಿ ಮಾತಾ ಪಿತೃಗಳ ಜವಾಬ್ದಾರಿ ಮುಖ್ಯವಾಗಿದೆ. ಶಿಕ್ಷಣ ನೀಡದ ತಂದೆ ತಾಯಿಗಳು ಮಕ್ಕಳಿಗೆ ಮೊದಲ ವೈರಿ ಆಗುತ್ತಾರೆ ಎಂದು ಅವರು ಹೇಳಿದರು.
ಇನ್ನೋರ್ವ ಅತಿಥಿ ದ.ಕ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ ಇಂದು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲೆಯು ಅನೇಕ ಸಾಧಕರನ್ನು ನೀಡಿದ ಜಿಲ್ಲೆಯಾಗಿದೆ. ಈ ಜಿಲ್ಲೆಯು ಶಿಕ್ಷಣ ಕಾಶಿಯಾಗಿದೆ ಎಂದರು.
ಮತ್ತೋರ್ವ ಅತಿಥಿ ಆಲ್ ಕಾರ್ಗೋ ಲ್ಯಾಜಿಸ್ಟಿಕ್ ಲಿಮಿಟೆಡ್‌ನ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಮಾತನಾಡಿ ಗ್ರ್ರಾಮೀಣ ಪ್ರದೇಶದಲ್ಲಿರುವ ಈ ಕಾಲೇಜು ಹಲವಾರು ಜನರನ್ನು ವಿದ್ಯಾವಂತರನ್ನಾಗಿಸಿದೆ. ಉದ್ಯೋಗಾವಕಾಶದ ಕೊರತೆಯ ಸಂದರ್ಭದಲ್ಲಿ ಸ್ವ್ವಉದ್ಯೋಗದ ಪ್ರೇರಣೆಯನ್ನು ಎಲ್ಲರಿಗೂ ನೀಡಿದೆ ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ, ಕಲಾವಿದ ಡಾ| ಪ್ರಭಾಕರ ಜೋಷಿ ಮಾತನಾಡಿ ವಿದ್ಯಾಮಂದಿರಗಳು ನೀಡುವ ವಿದ್ಯೆಯು ಜನರ ಬದುಕಿಗೆ ದಾರಿಯಾಗಬೇಕು. ಆಂಗ್ಲ ಶಿಕ್ಷಣದ ಒತ್ತಡದ ಸಂದರ್ಭದಲ್ಲಿ ಇಂದು ಕನ್ನಡದ ಶಿಕ್ಷಣವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದೆ. ಶಿಕ್ಷಣದಲ್ಲಿ ಯಾವುದೋ ಸಂಸ್ಕೃತಿಯ ಅನುಕರಣೆ ಸಲ್ಲದು. ಜನರಿಗೆ ಸಾರ್ಥಕವಾದ ಶಿಕ್ಷಣವನ್ನು ನೀಡಬೇಕು ಎಂದರು .
ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯಿಂದ ನಿರ್ಮಾಣವಾದ ಬಂಟ್ವಾಳ ಗೌರಿ ರಘುರಾಮ ಪ್ರಭು ಸ್ಮಾರಕ ಸಭಾಭವನವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೆಂಕಟರಮಣ ಸ್ವಾಮಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಲೋಕಾರ್ಪಣೆ ಮಾಡಿದರು. ಉಪಾಧ್ಯಕ್ಷರಾದ ಎಂ ಕಾವೇರಿ ಬಾಯಿ, ಸಂಘದ ಸದಸ್ಯರಾದ ಹೇಮಲತಾ ಶೆಣೈ, ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಲಾ ಕೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಾದ ನವನೀತ್ ಶೆಟ್ಟಿ, ನಿತೇಶ್ ಇವರುಗಳನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ವಿಶೇಷವಾಗಿ ಅಭಿನಂದಿಸಲಾಯಿತು
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ತುಕಾರಾಂ ಪೂಜಾರಿ, ಮುಖ್ಯ ಗ್ರ್ರಂಥಪಾಲಕರಾದ ಡಾ| ಎಚ್ ಆರ್ ಸುಜಾತ ಉಪನ್ಯಾಸಕರಾದ ರಮಾನಂಧ ಭಟ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಕು. ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸುವರ್ಣ ಮಹೋತ್ಸವದ ಸಮಾರಂಭದ ಕೊನೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Be the first to comment on "ಎಸ್.ವಿ.ಎಸ್.ಕಾಲೇಜು ಸುವರ್ಣ ಮಹೋತ್ಸವ ಸಮಾರೋಪ"