- ಕಲಾವಿದ ಬೆಳೆಯಬೇಕಾದರೆ ಬೇರೆಯವರ ಪ್ರದರ್ಶನವನ್ನೂ ನೋಡಬೇಕು: ಗೋವಿಂದ ಭಟ್ಟ
ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ದಶಮಾನದ ಸಂಭ್ರಮವಾಗಿ ಬಿ.ವಿ.ಕಾರಂತ ನೆನಪಿನ ಅಂತರ ಕಾಲೇಜು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವ ರಂಗಭೂಮಿಕಾ 2017 ಕಾರ್ಯಕ್ರಮ ಮಂಚಿ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಡಿಸೆಂಬರ್ 31ರಂದು ನಡೆಯಿತು.
ಸ್ಪರ್ಧೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಸ್ತುತಪಡಿಸಿದ ಸುದರ್ಶನ ವಿಜಯ ಪ್ರಥಮ ಸ್ಥಾನ ಗಳಿಸಿದೆ. ದ್ವಿತೀಯ ಸ್ಥಾನವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ತರಣಿಸೇನ ಕಾಳಗ ಗಳಿಸಿತು. ಬಂಟ್ವಾಳ ಎಸ್.ವಿ.ಎಸ್. ಕಾಲೇಜು ನರಕಾಸುರ ಮೋಕ್ಷ, ಸುರತ್ಕಲ್ ಗೋವಿಂದದಾಸ ಕಾಲೇಜು ಸುದರ್ಶನ ವಿಜಯ ಮತ್ತು ಮಂಗಳೂರು ರಥಬೀದಿಯ ಸರಕಾರಿ ಪ್ರ.ದರ್ಜೆ ಕಾಲೇಜು ವಿದ್ಯಾರ್ಥಿಗಳು ಬಬ್ರುವಾಹನ ಕಾಳಗ ಪ್ರಸಂಗಗಳನ್ನು ಪ್ರದರ್ಶಿಸಿದರು.
ಕಿರೀಟ ವೇಷದಲ್ಲಿ ಎಸ್.ಡಿ.ಎಂ.ನ ಅನುರಾಗ್ ಎಂ. (ಶ್ರೀರಾಮ), ಪುಂಡುವೇಷದಲ್ಲಿ ಆಳ್ವಾಸ್ ಕಾಲೇಜಿನ ಶಿವರಾಮ ಬಜಕೂಡ್ಲು (ಸುದರ್ಶನ), ಸ್ತ್ರೀವೇಷದಲ್ಲಿ ಗೋವಿಂದದಾಸ ಕಾಲೇಜಿನ ಬಿಂದಿಯಾ ಎಲ್. ಶೆಟ್ಟಿ (ಲಕ್ಷ್ಮೀ), ಬಣ್ಣದ ವೇಷದಲ್ಲಿ ಆಳ್ವಾಸ್ ನ ಸಚಿನ್ ಕೆ.(ಶತ್ರುಪ್ರಸೂದನ) ಬಹುಮಾನ ಗಳಿಸಿದರು.
ಯಕ್ಷಗಾನದ ಹಿರಿಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್, ಅಂಕಣಕಾರ, ಯಕ್ಷಗಾನ ವಿಮರ್ಶಕ ನಾ. ಕಾರಂತ ಪೆರಾಜೆ ಮತ್ತು ಸುಳ್ಯ ಮಹಾಬಲ ಭಟ್ ತೀರ್ಪುಗಾರರಾಗಿದ್ದರು.
ಇತ್ತೀಚೆಗೆ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಯಕ್ಷಗಾನದ ದಶಾವತಾರಿ ಕೆ. ಗೋವಿಂದ ಭಟ್ ಸೂರಿಕುಮೇರು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಹಿರಿ ಕಿರಿ ಎಂಬ ಭೇದವಿಲ್ಲದೇ ಕಲಾವಿದ ಕಲಿಕೆಯ ಹಸಿವಿನಿಂದ ಕೂಡಿರಬೇಕು. ಬೇರೆ ಬೇರೆ ಕಲಾವಿದರ ಪ್ರದರ್ಶನವನ್ನು ನೋಡುವುದರಿಂದ, ಬೇರೆ ಬೇರೆ ಕಲೆಗಳನ್ನು ಅಭ್ಯಸಿಸುವುದರಿಂದ ಪಾತ್ರಗಳಿಗೆ ಉತ್ತಮ ಪೋಷಣೆ ದೊರತು ಕಲೆಯ ಜೊತೆ ಕಲಾವಿದನೂ ಬೆಳೆಯುತ್ತಾನೆ. ಕಲೆ ನಿಂತ ನೀರಲ್ಲದಿದ್ದರೂ ಪರಂಪರೆಯನ್ನು ಬಿಟ್ಟು ಹೊಸತನಕ್ಕೆ ಹಪಹಪಿಸುತ್ತಾ, ಸಿಳ್ಳು ಚಪ್ಪಾಳೆಗಳನ್ನೇ ಉತ್ತಮತೆಯ ಮಾನದಂಡ ಎಂದುಕೊಂಡರೆ ಕಲೆ ಸೊರಗುತ್ತದೆ. ಹಾಗಾಗದಂತೆ ನೋಡಿಕೊಳ್ಳುವುದು ಯುವ ಮನಸ್ಸುಗಳಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೆಳಗ್ಗೆ ಕಾರ್ಯಕ್ರಮವನ್ನು ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಕೆ.ಚಂದ್ರಹಾಸ ಕರ್ಕೇರ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಚಿ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಭಾಗವಹಿಸಿದ್ದರು. ಗಣೇಶ ಐತಾಳ ಸ್ವಾಗತಿಸಿದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಸ್ಪರ್ಧೆ ನಡೆದವು.
ಸಂಜೆ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಲಾವಿದ, ಅಂಕಣಕಾರ ನಾ.ಕಾರಂತ ಪೆರಾಜೆ ಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಕಜೆ ರಾಮಚಂದ್ರ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಉಮಾನಾಥ ರೈ ವಂದಿಸಿದರು.
ಚಿತ್ರಗಳು: ರಾಮ್ ನರೇಶ್ ಮಂಚಿ
Be the first to comment on "ಮಂಚಿ ಯಕ್ಷೋತ್ಸವ: ಆಳ್ವಾಸ್ ಪ್ರಥಮ, ಎಸ್.ಡಿ.ಎಂ.ದ್ವಿತೀಯ"