ಶಂಭೂರಿನಲ್ಲಿರುವ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ನಾನಾ ವಿನೋದಾವಳಿಗಳ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಗ್ಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಿದ್ದರು. ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಕೆಎಂಎಫ್ ಆಡಳಿತ ನಿರ್ದೇಶಕ ಬಿ.ವಿ.ಸತ್ಯನಾರಾಯಣ ಪಥಸಂಚಲನ ಗೌರವ ಸ್ವೀಕರಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ದೀಪಪ್ರಜ್ವಲನ ಮಾಡಿದರು. ಅತಿಥಿಗಳಾಗಿ ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಜಯರಾಜ್, ಬಂಟ್ವಾಳ ಟೌನ್ ರೋಟರಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್, ಶೇಡಿಗುರಿ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಕೇಶವ ಪದವು, ಶೇಡಿಗುರಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷರಾದ ಸುನೀತಾ ಪದ್ಮನಾಭ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ ವಂದಿಸಿದರು.
ತುಳು ಸಾಹಿತ್ಯ ಅಕಾಡೆಮಿಯಿಂದ ಪ್ರೋತ್ಸಾಹ:
ಸಂಜೆ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಹಸ್ತಪತ್ರಿಕೆ ಸಾಧ್ಯತೆ ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಹೈಸ್ಕೂಲ್ ನಲ್ಲಿ ತುಳು ಭಾಷೆಯನ್ನು ಕಲಿಕಾ ಮಾಧ್ಯಮದೊಂದಿಗೆ ಅಳವಡಿಸಿ. ತುಳು ಸಾಹಿತ್ಯ ಅಕಾಡೆಮಿ ಇದಕ್ಕೆ ಪ್ರೋತ್ಸಾಹ ನೀಡಲಿದೆ ಎಂದರು.
ಈ ಸಂದರ್ಭ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಾಲಾ ನಾಟಕ ತಂಡವನ್ನು ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಸನ್ಮಾನಿಸಿದರು. ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯರಾದ ಗಾಯತ್ರಿ ರವೀಂದ್ರ ಸಫಲ್ಯ, ಬಿ.ಆರ್.ಪಿ ನಾರಾಯಣ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್, ಉದ್ಯಮಿ ಪದ್ಮನಾಭ ಮಯ್ಯ, ಪತ್ರಕರ್ತ ಹರೀಶ್ ಮಾಂಬಾಡಿ, ಸ್ಥಳೀಯ ವೈದ್ಯ ಡಾ. ಸುಬ್ರಹ್ಮಣ್ಯ ಭಟ್, ಜಿಲ್ಲಾ ಮಲೇರಿಯಾ ಪರೀವೀಕ್ಷಣಾಧಿಕಾರಿ ಜಯರಾಮ ಪೂಜಾರಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಬೊಂಡಾಲ ಸಚ್ಚಿದಾನಂದ ಶೆಟ್ಟಿ ವಹಿಸಿದ್ದರು.
ಉಸ್ತುವಾರಿ ಸಚಿವರಾದ ರಮಾನಾಥ ರೈ , ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ರೋಡ್ರೀಗಸ್ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಯಕ್ಷಗಾನ, ನಾಟಕ, ತುಳು ಜಾನಪದ ವೈವಿಧ್ಯ, ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆದವು. ಅಧ್ಯಾಪಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ"