ತುಳು ಸಾಂಪ್ರದಾಯಿಕ ಆಚರಣೆಗಳನ್ನು ಬಿಂಬಿಸುವ ವೇಷಗಳು, ತಟ್ಟೀರಾಯ, ಯಕ್ಷಗಾನದ ಗೊಂಬೆಗಳು, ಚೆಂಡೆ ವಾದ್ಯಗಳ ಮೆರವಣಿಗೆ ದಿಬ್ಬಣ ಅದಾದ ಬಳಿಕ ಕೊಡಿಯೇರಿಸುವ ಸಾಂಪ್ರದಾಯಿಕ ಆಚರಣೆಯ ಪ್ರತಿರೂಪವನ್ನು ನಡೆಸುವ ಮೂಲಕ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದ ತುಳು ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ತಾಲೂಕು ಮಟ್ಟದ ತುಳು ಸಮ್ಮೇಳನಕ್ಕೆ ಚಾಲನೆ ದೊರೆಯಿತು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮೆರವಣಿಗೆಗೆ ಚಾಲನೆ ನೀಡಿದರೆ, ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಮ್ಮೇಳನ ಉದ್ಘಾಟಿಸಿದರು.
ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರಿಗೆ ಸೈಕಲ್ ಟಯರ್, ಕಾರ್ ಕಂಬುಲ, ಪಾಲೆ ಬಂಡಿ, ಗೋಲಿಗೊಬ್ಬು, ಜಿಬಿಲಿ, ಕೆರೆದಂಡೆ, ಡೊಂಕಾಟ, ಕಲ್ಲಾಟ, ಉಪ್ಪು ಮುಡಿ, ಲಗೋರಿ, ಗೋಣಿ ಚೀರವು, ಹಗ್ಗ ಜಗ್ಗಾಟ, ಮುಟ್ಟಾಲೆ ಪಾಡಿ, ಹಿರಿಯ ನಾಗರಿಕರಿಗೆ ವೇಗದ ಸ್ಪರ್ಧೆ, ಬಟ್ಟಿ, ಕುಡುಪು, ಮುಟ್ಟಾಳೆ, ಬೀಡಿದ ಸೂಪು, ಪಜೆ, ಮಣ್ಣ್ದ ಬಾಜನ, ಕೈಲ್, ತಡ್ಪೆ, ಕುರುವೆ, ಮೈಪುಸೂಡಿ, ಕರ್ಬದ ಕೊಟ್ಯ,ಕೈಮಗ್ಗ, ಗಾಣದ ಕೊಟ್ಯ, ಮರತ್ತ ಕೊಟ್ಯ, ಚಮ್ಮಾರಿಕೆ, ಮೂರ್ತೆಗಾರಿಕೆ, ಬೆಲ್ಲ ತಯಾರಿಕೆಗಳ ಪ್ರಾತ್ಯಕ್ಷಿಕೆ, ಪುಸ್ತಕ, ವಸ್ತುಗಳ ಪ್ರದರ್ಶನ, ಮಾರಾಟ ಸಮ್ಮೇಳನದಲ್ಲಿ ಕಂಡುಬಂತು.
ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ ರೈ, ಸ್ವಾಗತ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಬಂದರೆ, ಅಕಾಡೆಮಿ ಸದಸ್ಯರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಮೆರವಣಿಗೆಯೊಂದಿಗೆ ಹೆಜ್ಜೆ ಹಾಕಿದರು.
ಬಂಧವರಿಗೆ ಬೆಲ್ಲ, ನೀರು, ಆತಿಥ್ಯ ತುಳು ಸಾಂಪ್ರದಾಯಿಕ ಜನಜೀವನವನ್ನು ನೆನಪಿಸುವ ವಸ್ತುಪ್ರದರ್ಶನಗಳು ಸಮ್ಮೇಳನಕ್ಕೆ ಮೆರುಗು ಕೊಟ್ಟಿತು.
Be the first to comment on "ತುಳು ಸಂಸ್ಕೃತಿ ಹಿರಿಮೆ ಸಾರುವ ಸಮ್ಮೇಳನಕ್ಕೆ ಚಾಲನೆ"