ಮತೀಯ ಸಾಮರಸ್ಯವನ್ನು ಜನರಲ್ಲಿ ಮೂಡಿಸಲು ಫರಂಗಿಪೇಟೆಯಿಂದ ಮಾಣಿವರೆಗೆ ನಡೆಸಲು ಉದ್ದೇಶಿಸಿರುವ ಸಾಮರಸ್ಯ ಯಾತ್ರೆ ಡಿ.12ರಂದು ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿದೆ. ಸಮಾರೋಪ ಸಮಾರಂಭ ಮಾಣಿಯಲ್ಲಿ ನಡೆಯಲಿದ್ದು, ಈ ಸಂದರ್ಭ ವಿವಿಧ ಪಕ್ಷ ಮುಖಂಡರಾದ ಶ್ರೀರಾಮ ರೆಡ್ಡಿ, ಸಿದ್ಧನಗೌಡ, ಎಲ್.ಹನುಮಂತಯ್ಯ, ಬಿ.ಎಲ್. ಶಂಕರ್ ಮತ್ತು ಚಿತ್ರನಟ ಪ್ರಕಾಶ್ ರೈ ಆಗಮಿಸುವ ನಿರೀಕ್ಷೆ ಇದೆ ಎಂದು ನಡಿಗೆಯ ರೂವಾರಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಲ್ಲಿ ಸಾಮರಸ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಹಿನ್ನೆಲೆಯಲ್ಲಿ ನಡಿಗೆ ಕೈಗೊಳ್ಳಲಾಗುವುದು. ಬೆಳಗ್ಗೆ ಪಾರಿವಾಳ ಹಾರಿಸುವ ಮೂಲಕ ನಡಿಗೆ ಆರಂಭಗೊಳ್ಳಲಿದೆ. ಯಾರಿಗೂ ತೊಂದರೆಯಾಗದಂತೆ ಘೋಷಣೆಗಳನ್ನು ಕೂಗದೆ ಫಲಕ ಹಿಡಿದುಕೊಂಡು ಬರಲಾಗುವುದು. ಸಂಜೆ ಮಾಣಿಯಲ್ಲಿ ಸಮಾರೋಪ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ನಮ್ಮದು ಪ್ರಗತಿಪರ ಜಿಲ್ಲೆಯಾಗಿದ್ದು ಜಾತ್ಯಾತೀತ ನೆಲೆಯಲ್ಲಿ ಹಿಂದಿನಿಂದಲೂ ಅನೇಕ ಹೋರಾಟಗಳು ನಡೆದಿರುತ್ತದೆ. ಜಾಗೃತಿ ಮೂಡಿಸುವುದೇ ಈ ನಡಿಗೆಯ ಉದ್ದೇಶ ಎಂದರು.
ಜೆಡಿಎಸ್ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರೈ, ನಾವು ಜಾತ್ಯಾತೀತ ಸಿದ್ಧಾಂತದ ಪಕ್ಷಪಾತಿ. ಎಲ್ಲರನ್ನೂ ಆಹ್ವಾನಿಸುತ್ತಿದ್ದೇವೆ ಎಂದು ಉತ್ತರಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಈ ನಡಿಗೆಯಲ್ಲಿ ಹಸಿರು ಸೇನೆ, ದಲಿತ್ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ತುಳು ಸಂಘಟನೆಗಳು ಭಾಗಿಯಾಗಲಿದ್ದು ಯುವ ಜನತೆಯನ್ನು ಸಂಘಟಿಸುವ ಈ ನಡಿಗೆ ಮುಂದಿನ ಜನಾಂಗಕ್ಕೆ ದಾರಿದೀಪವಾಗಲಿದೆ ಕೋಮುವಾದದ ವಿರುದ್ಧ ನಿರಂತರ ಇಂತಹ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ.ಎಸ್. ಮಹಮ್ಮದ್, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಪಂಚಾಯತ್ ಉಪಾಧ್ಯಕ್ಷ ಹಾಸಿರ್, ಸಿಪಿಐ ತಾಲೂಕು ಮುಖಂಡ ಶೇಖರ್, ಸಿಪಿಐ ಮುಖಂಡ ರಾಮಣ್ಣ ವಿಟ್ಲ, ಸಂಜೀವ ವಿಟ್ಲ, ಬಾಬು ಭಂಡಾರಿ, ಬಿ.ನಾರಾಯಣ, ಈಶ್ವರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಸಾಮರಸ್ಯ ನಡಿಗೆ ಸಮಾರೋಪಕ್ಕೆ ರಾಜಕೀಯ ನಾಯಕರು, ಚಿತ್ರತಾರೆಯರ ದಂಡು"