ಬಂಟ್ವಾಳ ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ಯೋಜನೆಗಾಗಿ 56.54 ಕೋಟಿ ರೂಪಾಯಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಂಟ್ವಾಳದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಬಂಟ್ವಳ ಪುರಸಭೆಯ ವ್ಯಾಪ್ತಿಯ ಬಿ.ಮೂಡ, ಬಿ.ಕಸಬಾ ಮತ್ತು ಪಾಣೆಮಂಗಳೂರು ಗ್ರಾಮಗಳಲ್ಲಿ 2011ರ ಜನಗಣತಿ ಪ್ರಕಾರ ಜನಸಂಖ್ಯೆ 40155 ಆಗಿದೆ. ಈಗಾಗಲೇ ಒಂದನೇ ಹಂತದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.90 ಸೀವರ್ ನೆಟ್‌ವರ್ಕ್ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಬಂಟ್ವಾಳ ಪಟ್ಟಣಕ್ಕೆ ಈಗಾಗಲೇ ಸಮಗ್ರ ಕುಡಿಯುವ ನೀರಿನ ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಬಂಟ್ವಾಳವು ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದ್ದು, ಪಟ್ಟಣಕ್ಕೆ ಬರುವ ಜನಸಂಖ್ಯೆಯೂ ದಿನಂಪ್ರತಿ ಹೆಚ್ಚುತ್ತಿದೆ. ಇಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಕೊಳಚೆ ನೀರು ನೇತ್ರಾವತಿ ಸೇರುವಂತಾಗಿದೆ. ಇದರಿಂದ ನೀರು ಕಲುಷಿತಗೊಂಡು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜನರ ಆರೋಗ್ಯ ವ್ಯವಸ್ಥೆ ಕಾಪಾಡುವ ಹಾಗೂ ಸುತ್ತಮುತ್ತಲಿನ ಜಲಮೂಲವನ್ನು ಮಲಿನಗೊಳ್ಳದಂತೆ ತಡೆಯಲು ಒಳಚರಂಡಿ ಯೋಜನೆ ಅಗತ್ಯವಿದೆ ಎಂದು ಹೇಳಿದರು.
1 ಮತ್ತು 2ನೇ ಹಂತದ ಯೋಜನೆ ಪೂರ್ಣಗೊಂಡಾಗ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ಒಳಚರಂಡಿ ಯೋಜನೆಗೆ ಮಾರ್ಗಸೂಚಿ ಪ್ರಕಾರ ಆರ್ಥಿಕ ಮಾದರಿ ರೂಪಿಸಲಾಗಿದೆ. ಸರಕಾರದ ಅನುದಾನ ಶೇ.70ರಷ್ಟು ಅಂದರೆ 3957.93 ಲಕ್ಷ ರೂ, ಆರ್ಥಿಕ ಸಂಸ್ಥೆಗಳಿಂದ ಸಾಲ ಶೇ.20 ಅಂದರೆ 1130.84 ಲಕ್ಷ ರೂ, ಸ್ಥಳೀಯ ಸಂಸ್ಥೆಯ ವಂತಿಗರ ಶೇ.10 ಅಂದರೆ 565.42 ಲಕ್ಷ ರೂ ಹೀಗೆ ಒಟ್ಟು 56.54 ಕೋಟಿ ರೂಪಾಯಿಗಳಾಗುತ್ತದೆ ಎಂದು ರೈ ಹೇಳಿದರು.
ಬಂಟ್ವಾಳ ಶೀಘ್ರ ನಗರಸಭೆ:
ಬಂಟ್ವಾಳ ಪುರಸಭೆ ಇನ್ನು ಶೀಘ್ರದಲ್ಲಿ ನಗರಸಭೆ ಆಗಲಿದ್ದು, ಆಗ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹೆಚ್ಚು ಬರಲಿದೆ. ಮತ್ತಷ್ಟು ವೇಗದ ಅಭಿವೃದ್ಧಿ ಇದರಿಂದ ಸಾಧ್ಯ ಎಂದ ರೈ, ಇದಕ್ಕೆ ಬಂದ ಆಕ್ಷೇಪಗಳನ್ನು ಪರಿಶೀಲಿಸಲಾಗುವುದು. ಅಭಿವೃದ್ಧಿ ಸಂದರ್ಭ ಸಣ್ಣಪುಟ್ಟ ಆಕ್ಷೇಪ, ಆತಂಕ ಸಹಜವಾಗಿಯೇ ಇರುತ್ತದೆ ಎಂದರು.
ಪುಂಜಾಲಕಟ್ಟೆ ರಸ್ತೆಗೆ 159 ಕೋಟಿ:
ಬಿ.ಸಿ.ರೋಡ್ ವೃತ್ತದಿಂದ ಪುಂಜಾಲಕಟ್ಟೆವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಪ್ರಕ್ರಿಯೆ ಅತಿ ಶೀಘ್ರದಲ್ಲಿ ಆರಂಭಗೊಳ್ಳಲಿದ್ದು, ಇದಕ್ಕೆ159 ಕೋಟಿ ರೂ. ವೆಚ್ಚವಾಗಲಿದೆ. ವಿಶ್ವೇಶ್ವರಯ್ಯ ನಿಗಮ ವತಿಯಿಂದ ನೇತ್ರಾವತಿ ನದಿ ಸವಕಳಿ ತಡೆಯಲು ನದಿ ಸುರಕ್ಷಣಾ ಕಾಮಗಾರಿಗೆ ಅಂದಾಜು 300 ಕೋಟಿ ರೂಪಾಯಿಗಳ ಕಾಮಗಾರಿ ನಡೆಸುವ ಯೋಜನೆ ಇದೆ ಎಂದು ರೈ ಹೇಳಿದರು.
ಕ್ರೀಡಾಂಗಣ, ಬಯಲು ರಂಗಮಂದಿರ:
ಬೆಂಜನಪದವಿನಲ್ಲಿ ಕ್ರೀಡಾಂಗಣ ನಿರ್ಮಿಸಲು 10 ಕೋಟಿ ರೂಪಾಯಿ ಆಡಳಿತಾತ್ಮಕ ಮಂಜೂರಾತಿ ದೊರಕಿದೆ. ಬಿ.ಸಿ.ರೋಡಿನ ಮಿನಿ ವಿಧಾನಸೌಧ ಬಳಿ ಬಯಲು ರಂಗಮಂದಿರ ನಿರ್ಮಿಸುವ ಯೋಜನೆ ಇದೆ ಎಂದ ರೈ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಬಸ್ ಆಗಮನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು. ಬಿ.ಸಿ.ರೋಡಿನಲ್ಲಿ ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಇರುವ ತೊಡಕುಗಳನ್ನು ನಿವಾರಿಸಲಾಗುವುದು ಎಂದರು.
Be the first to comment on "ಬಂಟ್ವಾಳ ಒಳಚರಂಡಿ ಯೋಜನೆಗೆ 56.54 ಕೋಟಿ ರೂ ಅನುಮೋದನೆ: ರೈ"